ಫೈನಾನ್ಸ್ ಕಂಪನಿಗೆ ನಾಮಹಾಕಿದ ವಂಚಕರು : 47 ಕೋಟಿ ರೂ ವಂಚನೆ

finance company

ಬೆಂಗಳೂರು: ಫೈನಾನ್ಸ್ ಕಂಪನಿಯವರ ಅರಿವಿಗೆ ಬಾರದಂತೆ ಸೈಬರ್ ವಂಚಕರು ಬರೋಬ್ಬರಿ 47 ಕೋಟಿ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾರತ್ ಹಳ್ಳಿ ಔಟರ್ ರಿಂಗ್ ರಸ್ತೆಯಲ್ಲಿರುವ ಬೆಂಗಳೂರು ಮೂಲದ ಫೈನಾನ್ಸ್ ಕಂಪನಿಯ ಖಾತೆಗೆ ಕನ್ನ ಹಾಕಲಾಗಿದ್ದು, ಕಂಪನಿಯ ಹಿರಿಯ ವ್ಯವಸ್ಥಾಪಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಸ್ಟ್ 6 ಮತ್ತು 7ರಂದು ಕಂಪನಿಯ ಅನುಮತಿ ಇಲ್ಲದೇ ಕೆಲವು ಖಾತೆಗಳಿಗೆ ಅನಿಯಮಿತ ಮತ್ತು ಅನುಮಾನಾಸ್ಪದವಾಗಿ ಹಣ ವರ್ಗಾವಣೆಯಾಗಿದೆ. ಆಗಸ್ಟ್ 7 ರಂದು ಈ ವರ್ಗಾವಣೆಗಳನ್ನು ಗಮನಿಸಿದ ಕಂಪನಿಯವರು ಕೂಡಲೇ ತಮ್ಮ ಖಾತೆ ಹೊಂದಿರುವ ಸಂಬಂಧಿತ ಬ್ಯಾಂಕ್‌ಗಳಿಗೆ ಮಾಹಿತಿ ನೀಡಿ, ಡೆಬಿಟ್ ಫ್ರೀಜ್ ಇರಿಸಿದ್ದಾರೆ. ಆಂತರಿಕ ತನಿಖೆ ನಡೆಸಿದಾಗ ಹಣ ವರ್ಗಾವಣೆಯಾದ ಖಾತೆಗಳು ಕಂಪನಿಯ ಕಡೆಯಿಂದ ವೇಟ್‌ಲಿಸ್ಟ್ ಮಾಡಲಾದ ಖಾತೆಗಳಲ್ಲ. ಮತ್ತು ಅವುಗಳ ಐಪಿ ಅಡ್ರೆಸ್‌ಗಳು ವಿದೇಶಿ ಮೂಲದವು ಎಂದು ತಿಳಿದು ಬಂದಿದೆ. ಕೂಡಲೇ ಕಂಪನಿಯವರು ಸಿಸಿಬಿಯ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹಣ ವರ್ಗಾವಣೆಯಾದ ಖಾತೆಗಳ ವಿವರಗಳನ್ನು ಪಡೆದುಕೊಳ್ಳಲಾಗಿದೆ. ಮತ್ತು ಆ ಖಾತೆಗಳು ಎಲ್ಲಿಯವು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *