ಹಣ್ಣು, ತರಕಾರಿ, ಬೇಳೆ ದುಬಾರಿ

ತುಮಕೂರು: ಈ ವಾರ ‘ಏರಿಕೆ’ ಬಿಸಿ ತಟ್ಟಿದೆ. ಹಣ್ಣು, ಸೊಪ್ಪು, ತರಕಾರಿ, ಬೇಳೆ ಸೇರಿದಂತೆ ಬಹುತೇಕ ಆಹಾರ ಪದಾರ್ಥಗಳು ದುಬಾರಿಯಾಗಿವೆ. ಹಣ್ಣಿನ ಧಾರಣೆಯಂತೂ ಗಗನಮುಖಿಯಾಗಿದೆ.

ಕಳೆದ ಕೆಲ ವಾರಗಳಿಂದ ಇಳಿಕೆಯತ್ತಲೇ ಸಾಗಿದ್ದ ತರಕಾರಿ ಬೆಲೆ ಈ ವಾರ ಏರಿಕೆಯತ್ತ ಮುಖ ಮಾಡಿದೆ.
ಬೀನ್ಸ್, ಕ್ಯಾರೇಟ್ ಸೇರಿದಂತೆ ಸಾಕಷ್ಟು ತರಕಾರಿಗಳ ದರ ಹೆಚ್ಚಳವಾಗಿದೆ. ಕಳೆದ ಕೆಲ ವಾರಗಳಿಂದ ಹೆಚ್ಚುತ್ತಲೇ ಸಾಗಿರುವ ಶುಂಠಿ ದರ ಮತ್ತೆ ಏರಿಕೆಯಾಗಿದೆ. ಫಾರಂ ಶುಂಠಿ ಕೆ.ಜಿ ₹70, ನಾಟಿ ಶುಂಠಿ ಕೆ.ಜಿ ₹90ಕ್ಕೆ ಮಾರಾಟವಾಗುತ್ತಿದೆ. ₹100ರ ಗಡಿ ದಾಟಿದ್ದ ನುಗ್ಗೇಕಾಯಿ ಬೆಲೆ ಒಮ್ಮೆಲೆ ಕುಸಿದಿದ್ದು, ಕೆ.ಜಿ ₹15-20ಕ್ಕೆ ಇಳಿಕೆಯಾಗಿದೆ. ಟೊಮೆಟೊ ಬೆಲೆ ಪಾತಾಳ ಕಂಡಿದ್ದು, ಏರುವ ಸೂಚನೆಗಳೇ ಕಾಣಿಸುತ್ತಿಲ್ಲ.

ಸೊಪ್ಪು ದುಬಾರಿ: ಏರಿಳಿತ ಕಂಡಿರುವ ಸೊಪ್ಪಿನ ಬೆಲೆ ಈಗ ಸಾಕಷ್ಟು ಹೆಚ್ಚಳವಾಗಿದೆ. ಬೇಸಿಗೆಯಲ್ಲಿ ಮಾರುಕಟ್ಟೆಗೆ ಸೊಪ್ಪು ಬರುವುದು ಕಡಿಮೆಯಾಗಿದ್ದು, ಕೊತ್ತಂಬರಿ ಸೊಪ್ಪು ಬೆಲೆ ದುಪ್ಪಟ್ಟಾಗಿದ್ದು, ಸಬ್ಬಕ್ಕಿ ಸೊಪ್ಪಿನ ದರ ಏರಿಕೆಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹50-60, ಸಬ್ಬಕ್ಕಿ ಕೆ.ಜಿ ₹30-40, ಮೆಂತ್ಯ ಸೊಪ್ಪು ಕೆ.ಜಿ ₹25-30, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಮಾರಾಟವಾಗುತ್ತಿದೆ.

ಹಣ್ಣು ಗಗನಮುಖಿ: ಬೇಸಿಗೆ ಬಿಸಿಲು ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಂಜಾನ್ ವ್ರತ ಆರಂಭವಾಗಿದ್ದು ಹಣ್ಣು ಧಾರಣೆ ಗಗನಮುಖಿಯಾಗಿದೆ. ಕಿತ್ತಳೆ ಹಣ್ಣು ಒಮ್ಮೆಲೆ ದುಪ್ಪಟ್ಟಾಗಿದೆ. ಸೇಬು, ಬಾಳೆ ಹಣ್ಣು, ಕಲ್ಲಂಗಡಿ, ಕರಬೂಜ ದುಬಾರಿಯಾಗಿವೆ. ಪಪ್ಪಾಯ ದಾಖಲೆ ಬೆಲೆಯತ್ತ ಹೆಜ್ಜೆ ಹಾಕಿದ್ದು, ಕೆ.ಜಿ ₹50 ತಲುಪಿದೆ.

ಬೇಳೆ ದುಬಾರಿ: ಹಿಂದಿನ ವಾರಗಳಲ್ಲಿ ತೊಗರಿ ಬೇಳೆ ಬೆಲೆಯಷ್ಟೇ ಏರಿಕೆಯಾಗಿದ್ದರೆ, ಈ ವಾರ ಇತರೆ ಬೇಳೆ ಕಾಳು, ಧಾನ್ಯಗಳ ಬೆಲೆ ಸಹ ಹೆಚ್ಚಳವಾಗಿದೆ. ಮಾರುಕಟ್ಟೆಗೆ ಬೇಳೆ, ಧಾನ್ಯದ ಆವಕ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಮಂಡಿಪೇಟೆ ಮಾರುಕಟ್ಟೆ ಮೂಲಗಳು ತಿಳಿಸಿವೆ.

ಎಣ್ಣೆ ಏರಿಕೆ: ಅಡುಗೆ ಎಣ್ಣೆ ಧಾರಣೆ ಸಹ ಕೊಂಚ ಹೆಚ್ಚಳವಾಗಿದೆ. ಸನ್ಫ್ಲವರ್ ಕೆ.ಜಿ ₹125-128, ಪಾಮಾಯಿಲ್ ಕೆ.ಜಿ ₹96-98, ಕಡಲೆಕಾಯಿ ಎಣ್ಣೆ ಕೆ.ಜಿ ₹160-165ಕ್ಕೆ ಮಾರಾಟವಾಗುತ್ತಿದೆ.

ಜೀರಿಗೆ ದರ ಏರಿಕೆ: ದುಬಾರಿಯಾಗಿರುವ ಬ್ಯಾಡಗಿ ಮೆಣಸಿನ ಕಾಯಿ ದರ ಇಳಿಯುವಂತೆ ಕಾಣುತ್ತಿಲ್ಲ. ಅದರ ಜತೆಗೆ ಈಗ ಜೀರಿಗೆ ಬೆಲೆ ಮತ್ತೆ ಹೆಚ್ಚಳವಾಗಿದೆ. ಕಳೆದ ಕೆಲ ವಾರಗಳಿಂದ ಜೀರಿಗೆ ದರ ಏರಿಕೆಯತ್ತ ಮುಖ ಮಾಡಿದ್ದು, ಈ ವಾರ ಕೆ.ಜಿಗೆ ₹20 ಹೆಚ್ಚಾಗಿದೆ. ಇತರೆ ಮಸಾಲೆ ಪದಾರ್ಥಗಳ ಬೆಲೆ ಕೊಂಚ ಏರಿಕೆಯಾಗಿದೆ. ಗಸಗಸೆ ಧಾರಣೆ ಅಲ್ಪ ಇಳಿಕೆಯಾಗಿದೆ.

ಧನ್ಯ ಕೆ.ಜಿ ₹105-150, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹600-650, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹250-260, ಹುಣಸೆಹಣ್ಣು ₹100-160 ಕರಿಮೆಣಸು ಕೆ.ಜಿ ₹550-580, ಜೀರಿಗೆ ಕೆ.ಜಿ ₹380-400, ಸಾಸಿವೆ ಕೆ.ಜಿ ₹75-80, ಮೆಂತ್ಯ ಕೆ.ಜಿ ₹90-95, ಚಕ್ಕೆ ಕೆ.ಜಿ ₹270-280, ಲವಂಗ ಕೆ.ಜಿ ₹820-850, ಗುಣಮಟ್ಟದ ಗಸಗಸೆ ಕೆ.ಜಿ ₹1,300-1400, ಬಾದಾಮಿ ಕೆ.ಜಿ ₹600-650, ಗೋಡಂಬಿ ಕೆ.ಜಿ ₹700-750, ದ್ರಾಕ್ಷಿ ಕೆ.ಜಿ ₹210-220ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಯಥಾಸ್ಥಿತಿ: ಯುಗಾದಿ ಹಬ್ಬದ ನಂತರ ಕೋಳಿ ಧಾರಣೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹120, ರೆಡಿ ಚಿಕನ್ ಕೆ.ಜಿ ₹200, ಸ್ಕಿನ್ಲೆಸ್ ಕೆ.ಜಿ ₹220, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹80ಕ್ಕೆ ಮಾರಾಟವಾಗುತ್ತಿದೆ.

ಮೀನು ಹೆಚ್ಚಳ: ಈ ವಾರ ಮೀನಿನ ದರ ಏರಿಕೆಯಾಗಿದೆ. ಅಂಜಲ್ ಹೊರತುಪಡಿಸಿದರೆ ಬಂಗುಡೆ, ಬೂತಾಯಿ, ಬೊಳಿಂಜರ್, ಬಿಳಿಮಾಂಜಿ ಸೇರಿದಂತೆ ಬಹುತೇಕ ಮೀನಿನ ದರ ಹೆಚ್ಚಳವಾಗಿದೆ. ಬಂಗುಡೆ ಕೆ.ಜಿ ₹230, ಬೂತಾಯಿ ಕೆ.ಜಿ ₹200, ಅಂಜಲ್ ಕೆ.ಜಿ ₹980, ಬೊಳಿಂಜರ್ ಕೆ.ಜಿ ₹280, ಬಿಳಿಮಾಂಜಿ ಕೆ.ಜಿ ₹1,220, ಕಪ್ಪುಮಾಂಜಿ ಕೆ.ಜಿ ₹710, ಸೀಗಡಿ ಕೆ.ಜಿ ₹580, ಏಡಿ ₹340ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.


ಹಣ್ಣು (ಬೆಲೆ ಕೆ.ಜಿ ₹) ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)
ಸೇಬು;180-200 ತೊಗರಿ ಬೇಳೆ;110-125
ದಾಳಿಂಬೆ;200 ಉದ್ದಿನ ಬೇಳೆ;115-135
ಮೂಸಂಬಿ;100 ಹೆಸರು ಬೇಳೆ;110-115
ಕಿತ್ತಳೆ;120-150 ಕಡಲೆ ಬೇಳೆ;68-70
ಸಪೋಟ;80 ಕಡಲೆಕಾಳು;60-65
ಏಲಕ್ಕಿ ಬಾಳೆ;80 ಅಲಸಂದೆ;78-85
ಪಚ್ಚಬಾಳೆ;50 ಅವರೆಕಾಳು;115-125
ಪಪ್ಪಾಯ;50 ಹುರುಳಿಕಾಳು;70-75
ಸೀಬೆ;100 ಹುರಿಗಡಲೆ;80-85
ಪೈನಾಪಲ್;80 ಬಟಾಣಿ;70-75
ಕರಬೂಜ;40-50 ಕಡಲೆ ಬೀಜ;120-130
ಕಲ್ಲಂಗಡಿ;25-30 ಗೋಧಿ;36-40
ದ್ರಾಕ್ಷಿ;50-80 ಸಕ್ಕರೆ;36-37


ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)
ಬೀನ್ಸ್;40-50
ಕ್ಯಾರೇಟ್;25-30
ಬೀಟ್ರೂಟ್;20-25
ಈರುಳ್ಳಿ;15-20
ಟೊಮೆಟೊ;10-15
ಆಲೂಗಡ್ಡೆ;20-25
ಗೆಡ್ಡೆಕೋಸು;15-20
ಮೂಲಂಗಿ;15-20
ಬೆಂಡೆಕಾಯಿ;30-40
ಬದನೆಕಾಯಿ;15-20
ಎಲೆಕೋಸು;10-15
ಹೂಕೋಸು(1ಕ್ಕೆ);20
ತೊಂಡೆಕಾಯಿ;30-40
ಹಾಗಲಕಾಯಿ;30-35
ನಗ್ಗೆಕಾಯಿ;15-20
ಮೆಣಸಿನಕಾಯಿ;50-60
ಕ್ಯಾಪ್ಸಿಕಂ;40-50
ಶುಂಠಿ;70-90
ಸೌತೆಕಾಯಿ 1ಕ್ಕೆ;8-10
ನಿಂಬೆಹಣ್ಣು 1ಕ್ಕೆ;4-5

Pragati TV Social Connect for more latest u

Leave a Reply

Your email address will not be published. Required fields are marked *