ಬೆಂಗಳೂರು: ಕಾರುಗಳ ಗಾಜುಗಳನ್ನು ಒಡೆದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ರಾಮಜೀನಗರ ಗ್ಯಾಂಗ್ ಸದಸ್ಯರ ಸಹಿತ ನಾಲ್ವರು ಆರೋಪಿಗಳನ್ನು ಇಲ್ಲಿನ ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುರಳಿ (38), ಸೆಂಥಿಲ್ (50) ಮತ್ತು ಮೂರ್ತಿ (49) ಹಾಗೂ ಕದ್ದ ವಸ್ತುಗಳನ್ನು ಸ್ವೀಕರಿಸುತ್ತಿದ್ದ ಜಾನ್ (35) ಬಂಧಿತ ಆರೋಪಿಗಳು. ಇವರಿಂದ 7 ಲ್ಯಾಪ್‌ಟಾಪ್‌ಗಳ ಸಹಿತ 5.85 ಲಕ್ಷ ರೂ. ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಸ್ತೆ ಬದಿ ಪಾರ್ಕ್ ಮಾಡಿ ಶಾಪಿಂಗ್, ಬ್ಯಾಂಕ್ ಕೆಲಸಕ್ಕೆಂದು ಹೋಗುವವರನ್ನು ಈ ಖತರ್ನಾಕ್ ಕಳ್ಳರ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ಪಾರ್ಕಿಂಗ್ ಮಾಡಿ ನಿಲ್ಲಿಸುತ್ತಿದ್ದ ಕಾರಿನ ಗಾಜು ಒಡೆದು ಕಾರಿನಲ್ಲಿದ್ದ ಲ್ಯಾಪ್‌ಟಾಪ್ ಬ್ಯಾಗ್ ಹಾಗೂ ಬೆಲೆಬಾಳುವ ವಸ್ತುಗಳನ್ನು ಎತ್ತೊಯ್ಯುತ್ತಿತ್ತು
ತಮಿಳುನಾಡಿನ ತಿರುಚನಾಪಳ್ಳಿ ಮೂಲದ ಆರೋಪಿಗಳು ಬೇರೆ ಬೇರೆ ನಗರಗಳಲ್ಲಿ ಸ್ಥಿತಿವಂತರು ಹೆಚ್ಚಾಗಿ ನೆಲೆಸಿರುವ ಏರಿಯಾಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಮನೆ ಬಳಿ ನಿಲ್ಲಿಸಿರುವ ಕಾರುಗಳ ಗಾಜಿನ ಮೂಲಕ ಒಳಗೆ ಏನೇನಿದೆ ಎಂದು ಗಮನಿಸಿ, ರಬ್ಬರ್ ಬ್ಯಾಂಡ್ ಹಾಗೂ ಗೋಲಿ ಸಹಾಯದಿಂದ ಗಾಜನ್ನು ಒಡೆಯುತ್ತಿದ್ದರು. ನಂತರ ಒಳಗಿರುವ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದರು.
ಕದ್ದ ವಸ್ತುಗಳನ್ನು ಆರೋಪಿ ಜಾನ್‌ಗೆ ಮಾರಾಟ ಮಾಡುತ್ತಿದ್ದರು. ಆಗಸ್ಟ್ 11ರಂದು ಬೆಂಗಳೂರಿನಲ್ಲಿ ಕೃತ್ಯ ಎಸಗಿದ್ದ ಆರೋಪಿಗಳ ಬೆನ್ನುಬಿದ್ದಿದ್ದ ಪೊಲೀಸರು, ಮತ್ತೊಂದು ಕೃತ್ಯಕ್ಕೆ ಆರೋಪಿಗಳು ಸಜ್ಜಾಗಿದ್ದಾಗಲೇ ಬಂಧಿಸಿದ್ದಾರೆ. ಆರೋಪಿಗಳು ಬೆಂಗಳೂರಿನ 8 ಕಡೆಗಳಲ್ಲಿ ಕೃತ್ಯ ಎಸಗಿರುವುದು ಕಂಡು ಬಂದಿದೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ