ಮೀನು ವ್ಯಾಪಾರಿಯ ಮಗಳು ಖುಷಿಗೆ 16 ಚಿನ್ನದ ಪದಕ.
ಬೀದರ್ : ಅವಿರತ ಶ್ರಮಪಟ್ಟು, ಶ್ರದ್ಧೆಯಿಟ್ಟು ಮಾಡಿದರೆ ಎಂತಹ ಕನಸೂ ನನಸಾಗುತ್ತದೆ. ಕಂಡ ಕನಸು ಕಾಣುವುದು ಅದನ್ನ ಸಾಕಾರಗೊಳಿಸುವುದು ಅವರವರ ಕೈಯಲ್ಲಿಯೇ ಇದೆ. ಇಂತಹ ಅದ್ಭುತ ಕನಸನ್ನ ಸಾಕಾರಗೊಳಿಸಿ ಚಿನ್ನದ ವಿದ್ಯಾರ್ಥಿಯಾಗಿದ್ದಾರೆ. ಪಶು ವೈದ್ಯಕೀಯ ಪದವಿಯಲ್ಲಿ 16 ಚಿನ್ನದ ಪದಕಗಳನ್ನ ಬಾಚಿಕೊಂಡ ಉಡುಪಿಯ ಖುಷಿ, 6 ಚಿನ್ನದ ಪದಕ ಪಡೆದ ತುಮಕೂರಿನ ಭೂಮಿಕಾರ ಯಶೋಗಾಥೆ ಎಂತಹವರನ್ನೂ ಪ್ರೇರೇಪಿಸುತ್ತದೆ.
ಮೀನು ವ್ಯಾಪಾರಿಯ ಮಗಳು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ
ಉಡುಪಿಯ ಮಂದಾರ್ತಿ ಗ್ರಾಮದ ಖುಷಿ, ಪಶುವೈದ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ ಪದವಿಯಲ್ಲಿ 16 ಚಿನ್ನದ ಪದಕವನ್ನ ಪಡೆದುಕೊಂಡು ಇಡೀ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಪಾಸಾಗಿದ್ದಾರೆ. ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ಖುಷಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು.
ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ 2023-24ನೇ ಬ್ಯಾಚ್‌ನ ವಿದ್ಯಾರ್ಥಿನಿ ಖುಷಿ, ಚಿನ್ನದ ಪದಕ ಪಡೆಯುವ ನಿಟ್ಟಿನಲ್ಲಿ ಕಷ್ಟಪಟ್ಟು ಓದಿದ್ದಾರೆ. ಆದರೆ, 16 ಚಿನ್ನದ ಪದಕಗಳು ಒಲಿದು ಬರುತ್ತವೆ ಎಂದು ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಈ ವಿಷಯ ಗೊತ್ತಾದ ನಂತರ ‘ಖುಷಿ’ ವ್ಯಕ್ತಪಡಿಸಲು ಪದಗಳು ಸಾಲುತ್ತಿಲ್ಲ ಎಂದು ಅವರು ಟಿವಿ9 ಜೊತೆಗೆ ಸಂತಸ ಹಂಚಿಕೊಂಡಿದ್ದಾರೆ.
ವಿಶ್ವವಿದ್ಯಾಲಯಕ್ಕೆ ದ್ವೀತಿಯ ಸ್ಥಾನ ಪಡೆದುಕೊಂಡ ಭೂಮಿಕಾ
ಇನ್ನು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಗ್ರಾಮದ ರೈತನ ಮಗಳು ಭೂಮಿಕಾ 6 ಚಿನ್ನದ ಪದಕ ಪಡೆದುಕೊಂಡು ವಿಶ್ವವಿದ್ಯಾಲಯಕ್ಕೆ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.
For More Updates Join our WhatsApp Group :




