ಬೆಂಗಳೂರು: ಕೇಂದ್ರ ಬಜೆಟ್ನಲ್ಲಿ ಚಿನ್ನದ ಮೇಲಿನ ಕಸ್ಟಮ್ಸ್ ಸುಂಕದಲ್ಲಿ ಇಳಿಕೆಯಾದ ಪರಿಣಾಮ ಗಗನಮುಖಿಯಾಗಿದ್ದ ಚಿನ್ನದ ಬೆಲೆ ಭೂಮಿಗೆ ಇಳಿದು ಬರುತ್ತಿರುವ ಲಕ್ಷಣ ಕಂಡುಬರುತ್ತಿದೆ. ಪ್ರಸ್ತುತ ಚಿನ್ನದ ಬೆಲೆ 24 ಕ್ಯಾರೆಟ್ನ 10 ಗ್ರಾಂಗೆ 69000 ಇದ್ದು, 22 ಕ್ಯಾರೆಟ್ 10 ಗ್ರಾಂಗೆ 64000 ಸಮೀಪ ವಹಿವಾಟಾಗುತ್ತಿದೆ.
ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿರುವುದರಿಂದ ಆಭರಣ ಪ್ರಿಯರು ಸಂತಸಗೊಂಡಿದ್ದಾರೆ. ಚಿನ್ನದ ಮೇಲೆ ಹೂಡಿಕೆ ಮಾಡುವವರೂ ಆಭರಣ ಅಂಗಡಿಗಳತ್ತ ಮುಖ ಮಾಡುತ್ತಿದ್ದಾರೆ.
ಇದೀಗ ಆಷಾಢ ಇರುವುದರಿಂದ ಆಭರಣ ಖರೀದಿಗೆ ಜನ ಅಷ್ಟಾಗಿ ಆಸಕ್ತಿ ತೋರುವುದಿಲ್ಲ. ಆದರೆ ಇನ್ನು ಕೆಲವೇ ದಿನಗಳಲ್ಲಿ ಶ್ರಾವಣ ಬರಲಿದ್ದು, ಗ್ರಾಹಕರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಚಿನ್ನಾಭರಣ ಖರೀದಿಗೆ ಆಸಕ್ತಿ ತೋರುತ್ತಾರೆ. ಮದುವೆಯ ಶುಭ ಕಾರ್ಯಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತವೆ. ಶ್ರಾವಣ ಮಾಸದ ನಂತರ ಭಾದ್ರಪದ ಆಶ್ವಿಯುಜ ಮಾಸದಲ್ಲಿ ಅನೇಕ ಹಬ್ಬಗಳು ಬರುತ್ತವೆ. ಈ ಹಿನ್ನೆಲೆಯಲ್ಲಿ ಖರೀದಿದಾರರ ಸಂಖ್ಯೆ ಹೆಚ್ಚಾಗುತ್ತದೆ ಎಂಬ ನಿರೀಕ್ಷೆಯಲ್ಲಿ ವ್ಯಾಪಾರಿಗಳಿದ್ದಾರೆ.
ಮತ್ತೊಂದೆಡೆ ಚಿನ್ನದ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಳಿಕೆಯಾದರೆ ಹಳದಿ ಲೋಹದ ಬೆಲೆ ಮತ್ತಷ್ಟು ಕಡಿಮೆಯಾಗಬಹುದು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಚಿನ್ನದ ಬೆಲೆ 65 ಸಾವಿರ ರೂ.ಗೆ ತಲುಪುವ ಸಾಧ್ಯತೆಯೂ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ.
ಕಳೆದ ಐದು ವರ್ಷಗಳಲ್ಲಿ ಚಿನ್ನದ ಬೆಲೆ ದ್ವಿಗುಣಗೊಂಡಿದೆ. 2019ರಲ್ಲಿ 10ಗ್ರಾಂಗೆ ಕೇವಲ 37 ಸಾವಿರ ರೂಪಾಯಿ ಇದ್ದಿದ್ದು, 2024ರ ವೇಳೆಗೆ 75 ಸಾವಿರ ರೂ.ಗೆ ಏರಿಕೆ ಕಂಡಿದೆ. ಕೇವಲ 4ವರ್ಷದಲ್ಲಿ ಈ ಪ್ರಮಾಣದಲ್ಲಿ ಚಿನ್ನದ ಬೆಲೆ ಏರಿಕೆಯಾಗಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ತಜ್ಞರು ಹೇಳುತ್ತಾರೆ.
ಆದರೆ ಕೇಂದ್ರ ಬಜೆಟ್ ನಲ್ಲಿ ಚಿನ್ನ ಸೇರಿದಂತೆ ಇತರೆ ಅಮೂಲ್ಯ ಲೋಹಗಳ ಆಮದು ಸುಂಕದಲ್ಲಿ ಭಾರಿ ಇಳಿಕೆ ಘೋಷಿಸಿದ ಬಳಿಕ ಚಿನ್ನ, ಬೆಳ್ಳಿ, ಪ್ಲಾಟಿನಂ ಮುಂತಾದ ಲೋಹಗಳ ಬೆಲೆ ಇಳಿಕೆಯಾಗುತ್ತಿದೆ.