ಆಸ್ತಿ ಖರೀದಿ, ಮಾರಾಟಗಾರರಿಗೆ ಸಿಹಿ ಸುದ್ದಿ : ನೋಂದಣಿ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ಬೆಂಗಳೂರು: ಉಪ–ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡದೆಯೇ ಆಸ್ತಿ ನೋಂದಣಿಗೆ ಅವಕಾಶ ಕಲ್ಪಿಸುವ ‘ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ’ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೇ 8ರಂದು ಅಂಕಿತ ಹಾಕಿದ್ದು, ರಾಜ್ಯ ಸರ್ಕಾರವು ಮಸೂದೆ ಜಾರಿಗೆ ಶನಿವಾರ ಅಧಿಸೂಚನೆ ಹೊರಡಿಸಿದೆ.

ಈ ಮಸೂದೆಗೆ ವಿಧಾನಮಂಡಲವು ಇದೇ ಫೆಬ್ರುವರಿಯಲ್ಲಿ ಅನುಮೋದನೆ ನೀಡಿತ್ತು. ಅದನ್ನು ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್ ಅವರ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ, ಅವರು ಕೆಲವು ಸ್ಪಷ್ಟನೆಗಳನ್ನು ಕೇಳಿ ಮಸೂದೆಯನ್ನು ಸರ್ಕಾರಕ್ಕೆ ಮರಳಿಸಿದ್ದರು. ಮಸೂದೆಯಲ್ಲಿ ಕೆಲವು ಅಂಶಗಳನ್ನು ಉಲ್ಲೇಖಿಸಿ, ‘ತಿದ್ದುಪಡಿ ಪ್ರಕಾರ, ನೋಂದಣಿಗೆ ಸಂಬಂಧಿಸಿದಂತೆ ಡಿಜಿಟಲ್‌ ಸಹಿ ಇರುವ ದಾಖಲೆಗಳನ್ನು ನೀಡಲಾಗುತ್ತದೆ. ಇದು ಹಣಕಾಸು ವಂಚನೆ ಮತ್ತು ನೋಂದಣಿ ಪ್ರಕ್ರಿಯೆ ವೇಳೆಯಲ್ಲಿ ವಂಚನೆಗೆ ಕಾರಣವಾಗಬಹುದು. ಈ ಅಪಾಯವನ್ನು ಬಹಳ ಎಚ್ಚರದಿಂದ ನಿರ್ವಹಿಸಬೇಕು’ ಎಂದಿದ್ದರು.

ಇದಕ್ಕೆ ಸುದೀರ್ಘವಾದ ವಿವರಣೆಗಳ ಸಹಿತ ಕಂದಾಯ ಇಲಾಖೆಯು ರಾಜ್ಯಪಾಲರಿಗೆ ಸ್ಪಷ್ಟೀಕರಣ ನೀಡಿತ್ತು. ಅಲ್ಲದೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಈ ಮಸೂದೆ ಕುರಿತು ವಿವರಣೆ ನೀಡಿದ್ದರು. ಆನಂತರ ರಾಷ್ಟ್ರಪತಿಯ ಅಂಕಿತಕ್ಕೆ ಮೀಸಲಿಟ್ಟು, ಅಂಕಿತ ಹಾಕಿದ್ದ ರಾಜ್ಯಪಾಲರು, ಸೆ.19ರಂದು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದರು. ಜಿಲ್ಲಾ ರಿಜಿಸ್ಟ್ರಾರ್, ಸ್ವಯಂ ಪ್ರೇರಿತವಾಗಿ ಅಥವಾ ಯಾವುದೇ ತೊಂದರೆಗೊಳಾದ ವ್ಯಕ್ತಿಯಿಂದ ಸ್ವೀಕರಿಸಿದ ದೂರಿನ ಮೇಲೆ ನೋಟಿಸ್ ಜಾರಿ ಮಾಡಬಹುದಾಗಿದೆ. ನಕಲಿ ದಾಖಲೆಗಳ ನೋಂದಣಿಗೆ ದಂಡವನ್ನು ವಿಧಿಸಲು ಮತ್ತು ಕಂಪನಿಗಳಿಂದ ನಕಲಿ ದಾಖಲೆಗಳ ನೋಂದಣಿಯೊಂದಿಗೆ ನಿರ್ಬಂಧ ಹೇರಲು ಆ ಮಸೂದೆ ಸಹಾಯ ಮಾಡುತ್ತದೆ.

ನಕಲಿ ದಾಖಲೆಗಳು ಮತ್ತು ಕಾನೂನಿನಿಂದ ನಿಷೇಧಿಸಲಾದ ಇತರ ದಾಖಲೆಗಳ ನೋಂದಣಿಯನ್ನು ನಿರಾಕರಿಸುವ ಅಧಿಕಾರವನ್ನು ರಿಜಿಸ್ಟ್ರಾರ್‌ಗೆ ನೀಡುವ ಮಸೂದೆಯನ್ನು ಜುಲೈ 2023 ರಲ್ಲಿ ಅಸೆಂಬ್ಲಿಯಲ್ಲಿ ಮಂಡಿಸಲಾಯಿತು. ಇದನ್ನು ಕೇಂದ್ರದ ಅನುಮೋದನೆಗೆ ಕಳುಹಿಸಲಾಗಿದೆ.

Leave a Reply

Your email address will not be published. Required fields are marked *