ಶಿರಾ ರೈತರಿಗೆ ಗುಡ್ ನ್ಯೂಸ್

ಶಿರಾ ರೈತರಿಗೆ ಗುಡ್ ನ್ಯೂಸ್

ಹಾಲು ಕರೆಯುವ ಸ್ಪರ್ಧೆಯಲ್ಲಿ ₹50 ಸಾವಿರ ಗೆಲ್ಲುವ ಅವಕಾಶ

ಶಿರಾ : ತಾಲ್ಲೂಕಿನಲ್ಲಿ ರೈತರನ್ನು ಹೈನುಗಾರಿಕೆಯತ್ತ ಉತ್ತೇಜಿಸುವ ಉದ್ದೇಶದಿಂದ ತಾಲ್ಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆ, ರಾಜ್ಯ ಮಟ್ಟದ ಹಳ್ಳಿಕಾರ್ ತಳಿಗಳ ಪ್ರದರ್ಶನ ಹಾಗೂ ಜಿಲ್ಲಾ ಮಟ್ಟದ ಶ್ವಾನಗಳ ಪ್ರದರ್ಶನವನ್ನು ಜನವರಿ 9 ಮತ್ತು 10ರಂದು ಆಯೋಜಿಸಲಾಗಿದೆ.

ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ನಡೆಯುವ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ 23ನೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಅಂಗವಾಗಿ ಈ ಕಾರ್ಯಕ್ರಮಗಳನ್ನು ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಹಾಗೂ ತುಮಕೂರು ಹಾಲು ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಗರ ಪಶುಪಾಲನಾ ಇಲಾಖೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಯಿತು.

ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್. ಗೌಡ ಮಾತನಾಡಿ, ರೈತರು ಹೈನುಗಾರಿಕೆಯನ್ನು ಉದ್ಯಮದ ರೀತಿಯಲ್ಲಿ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಗುಣಮಟ್ಟದ ಹಾಲು ಉತ್ಪಾದನೆ ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.

ಹಾಲು ಕರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ 50 ಸಾವಿರ ರೂ., ದ್ವಿತೀಯ 30 ಸಾವಿರ ರೂ., ತೃತೀಯ 20 ಸಾವಿರ ರೂ. ನಗದು ಹಾಗೂ ಆಕರ್ಷಕ ಪಾರಿತೋಷಕಗಳನ್ನು ತುಮಕೂರು ಹಾಲು ಒಕ್ಕೂಟ ನೀಡಲಿದೆ. ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳಿಗೆ ತಲಾ 2 ಸಾವಿರ ರೂ. ನಗದು ಮತ್ತು ಸಮಾಧಾನಕರ ಬಹುಮಾನವನ್ನು ಪಶುಪಾಲನಾ ಇಲಾಖೆ ವಿತರಿಸಲಿದೆ.

ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳ ಉಪ ನಿರ್ದೇಶಕ ಡಾ. ಎಚ್.ಎಂ. ಶಿವಪ್ರಸಾದ್ ಮಾತನಾಡಿ, ಹಾಲು ಕರೆಯುವ ಸ್ಪರ್ಧೆಯಲ್ಲಿ ಶಿರಾ ತಾಲ್ಲೂಕಿನ ರೈತರಿಗೆ ಮಾತ್ರ ಅವಕಾಶವಿದ್ದು, ಜ.9ರಂದು ಮಧ್ಯಾಹ್ನ 12ರಿಂದ ನೋಂದಣಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು. ಜ.10ರ ಬೆಳಗ್ಗೆ ಹಾಲಿನ ಪ್ರಮಾಣದ ಆಧಾರದಲ್ಲಿ ಬಹುಮಾನ ಘೋಷಿಸಲಾಗುವುದು ಎಂದರು.

ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಜೆ. ಸಂಪತ್ ಕುಮಾರ್ ಮಾಹಿತಿ ನೀಡಿ, ರಾಜ್ಯ ಮಟ್ಟದ ಹಳ್ಳಿಕಾರ್ ತಳಿ ಪ್ರದರ್ಶನದಲ್ಲಿ ಉತ್ತಮ ರಾಸುಗಳಿಗೆ ಕ್ರಮವಾಗಿ 10,000, 7,000 ಮತ್ತು 5,000 ರೂ. ಬಹುಮಾನ ನೀಡಲಾಗುವುದು. ಜ.10ರಂದು ನಡೆಯುವ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಪ್ರಥಮ 25 ಸಾವಿರ, ದ್ವಿತೀಯ 15 ಸಾವಿರ, ತೃತೀಯ 10 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ ಎಂದು ಹೇಳಿದರು.

ಹೆಚ್ಚಿನ ಮಾಹಿತಿಗಾಗಿ ಡಾ. ನಾಗೇಶ್ – 9916142011 ಸಂಪರ್ಕಿಸುವಂತೆ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಎಚ್. ನಾಗೇಶ್ ಸೇರಿದಂತೆ ತಾಲೂಕಿನ ಹಲವಾರು ಪಶು ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *