ಬೆಂಗಳೂರು: ಉದ್ಯೋಗ ಸೃಷ್ಟಿ, ತಂತ್ರಜ್ಞಾನ ಅಳವಡಿಕೆ ಮತ್ತು ಕೌಶಲಾಭಿವೃದ್ಧಿಗೆ ಜಾಗತಿಕ ಪ್ರತಿಭೆ, ಸಂಪನ್ಮೂಲ ಹಾಗೂ ನೈಪುಣ್ಯ ಬಳಕೆಗೆ ವೇದಿಕೆ ಕಲ್ಪಿಸಿಕೊಡುವ ಬಹುನಿರೀಕ್ಷಿತ “ಕರ್ನಾಟಕ ಗ್ಲೋಬಲ್ ಕ್ಯಾಪ್ಯಾಬಿಲಿಟಿ ಸೆಂಟರ್’ (ಜಿಸಿಸಿ) ವರದಿಯನ್ನು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಬಿಡುಗಡೆಗೊಳಿಸಿದರು.
ವಿಧಾನಸೌಧದಲ್ಲಿ ನಡೆದ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಜಿಸಿಸಿ ಉದ್ಯಮದ ಪ್ರಮುಖ ನಾಯಕರು ಮತ್ತು ಅನುಭವಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕವನ್ನು ಜಿಸಿಸಿಗಳಿಗೆ ಪ್ರಮುಖ ತಾಣವಾಗಿ ಗಟ್ಟಿಗೊಳಿಸುವ ಮತ್ತು ಉನ್ನತೀಕರಿಸುವ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಯಿತು.
ರಾಜ್ಯ ಸರಕಾರದ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಜತೆಗೆ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ನಿರ್ಮಾಣ, ನಿರ್ವಹಣೆ ಮತ್ತು ವಿಸ್ತರಣೆಯಲ್ಲಿ ಮಾರುಕಟ್ಟೆ ಮುಂಚೂಣಿಯಲ್ಲಿರುವ ಎಎನ್‌ಎಸ್‌ಆರ್ ಸಹಯೋಗದೊಂದಿಗೆ ಬಹುನಿರೀಕ್ಷಿತ ಕರ್ನಾಟಕ ಜಿಸಿಸಿ ಭೂದೃಶ್ಯ ವರದಿಯನ್ನು ಬಿಡುಗಡೆಗೊಳಿಸಲಾಗಿದೆ.