ಮಂಡ್ಯ: ಪ್ರಿಯಾಂಕ ಖರ್ಗೆ ಮಾತಿಗೆ ಮುಂಚೆ ಊರಿಗೆಲ್ಲ ಬುದ್ಧಿ ಹೇಳುತ್ತಿದ್ದರು. ಈಗ ಅವರೇ ಬುದ್ಧಿ ಹೇಳಿಸಿಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಮಂಡ್ಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.
ಖರ್ಗೆ ಅವರ ಕುಟುಂಬ ಕೆಐಡಿಬಿಯಿಂದ ಸಿಎ ಸೈಟ್ ಪಡೆದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು; ಹಲವಾರು ಜನರಿಗೆ ಈ ರೀತಿಯಲ್ಲಿ ಜಾಗ ಕೊಟ್ಟಿದ್ದಾರೆ, ಬೇಕಾದಷ್ಟು ಪ್ರಕರಣಗಳು ನಡೆದಿವೆ. ಖರ್ಗೆ ಅವರು ದೇಶಕ್ಕೆ, ನಾಡಿಗೆಲ್ಲ ಬುದ್ದಿ ಹೇಳುವವರು, ಉಪದೇಶ ಮಾಡುವವರು. ಯಾವ ಆಧಾರದ ಮೇಲೆ ಈ ಜಾಗವನ್ನು ಇವರು ತೆಗೆದುಕೊಂಡಿದ್ದಾರೆ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.
ದುಡ್ಡು ಕೊಟ್ಟು ಖರೀದಿಸಲು ಆಗುತ್ತಿರಲಿಲ್ಲವಾ? ಖಾಸಗಿ ಜಮೀನು ಖರೀದಿ ಮಾಡಬಹುದಿತ್ತು. ಕೆಐಎಡಿಬಿ ಜಾಗವೇ ಬೇಕಿತ್ತಾ? ಇದು ಅಧಿಕಾರ ದುರಪಯೋಗ. ದೇಶಕ್ಕೆ ಬುದ್ದಿ ಹೇಳುವವರು ಇದಕ್ಕೆ ಉತ್ತರ ಹೇಳಬೇಕು ಎಂದು ಅವರು ಟೀಕಿಸಿದರು.
ರಾಜಭವನ ಚಲೋಗೆ ಸಚಿವರ ವ್ಯಂಗ್ಯ:
ಕಾಂಗ್ರೆಸ್ ನಾಯಕರು 30ನೇ ತಾರೀಖು ರಾಜಭವನ ಚಲೋ ಮಾಡುತ್ತಿರುವುದಕ್ಕೆ ಬಹಳ ಸಂತೋಷ. ಅವರು ರಾಜಭವನದ ಜೊತೆಗೆ ರಾಷ್ಟ್ರಪತಿ ಭವನ ಚಲೋ ಕೂಡ ಮಾಡಲಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮನೆಗೆ ಕೂಡ ಹೋಗಲಿ. ಸತ್ತಿರುವ ವಿಚಾರ ಇಟ್ಟುಕೊಂಡು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಮಹಾನ್ ಅಪರಾಧ ಮಾಡಿದ್ದಾರೆ ಎನ್ನುತ್ತಿದ್ದಾರೆ. ನಾನೇ ಕೈ ಜೋಡಿಸಿ ಮನವಿ ಮಾಡುತ್ತೇನೆ . ರಾಜ್ಯಪಾಲರ ಅನುಮತಿ ಪಡೆದು ತನಿಖೆ ಮಾಡಲಿ ಎಂದು ಸಚಿವರು ಸವಾಲು ಹಾಕಿದರು.
ನನ್ನ ಬಗ್ಗೆ ಮಾತನಾಡುವ ಅಸಾಮಿಯ ಬಗ್ಗೆ ಚರ್ಚೆ ಮಾಡಲು ಬಹಳಷ್ಟು ವಿಚಾರಗಳು ಇವೆ. ಪಾಪ ನಮ್ಮನ್ನು ಕೆದಕಿದ್ದಾರೆ. ನಿನ್ನೆಯ ದಿನ ಅಸಲಿ ನಕಲಿ ಎಂದು ಹೇಳಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಸತ್ತರ ಹೆಸರಲ್ಲಿ ಭೂಮಿ ಖರೀದಿ ಮಾಡಿದ್ದಾರೆ. ಡಿ ನೋಟಿಫಿಷನ್ ಮಾಡಿಕೊಂಡು ಜೀವನ ಮಾಡುವವರು ಇವರು. ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಇವರಿಗೆ ಇದೀಯಾ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಂತ್ರಿಗಳ ಲೇಟರ್ ಪ್ಯಾಡ್ ನಲ್ಲಿ ಈ ಜನ ಏನೆಲ್ಲಾ ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಎಲ್ಲರಿಗೂ ಇದೆ. ಮೂಡಾ ದಾಖಲೆಗಳಲ್ಲಿ ಸಹಿ ವ್ಯತ್ಯಾಸ ಜನ ಮಾತನಾಡುತ್ತಿದ್ದಾರೆ. ಈ ಹಗರಣದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ಟಾರ್ಚ್ ಹಾಕಿ ನೋಡಿದರೂ ಅಷ್ಟೇ, ಹಾಕದೇ ನೋಡಿದರೂ ಅಷ್ಟೇ. ಅದು ಸರ್ಕಾರಿ ಭೂಮಿ. ಸರ್ಕಾರಿ ಭೂಮಿ ಲಪಟಾಯಿಸಿ ಮೂಡಾ ಸೈಟ್ ಪಡೆದಿದ್ದಾರೆ. ಇದಕ್ಕೆ ಉತ್ತರ ಕೊಡಲಿ ಎಂದು ಅವರು ಒತ್ತಾಯ ಮಾಡಿದರು.
ಕಾನೂನು ಪ್ರಕಾರ ಎಷ್ಟು ಸೈಟ್ ಬೇಕಾದರೂ ಪಡೆಯಿರಿ. ಇದಕ್ಕೆ ನಮ್ಮ ವಿರೋಧವಿಲ್ಲ. ಸುಳ್ಳು ದಾಖಲೆ ಸೃಷ್ಟಿ ಮಾಡಿ, ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಇಂಥ ಕೆಲಸ ಮಾಡಿದ್ದಾರೆ. ಸಾಮಾನ್ಯ ರೈತನೊಬ್ಬ ಬಂದು ಜಮೀನು ಖಾತೆ ಮಾಡಲು ಹೇಳಿದರೆ ಮಾಡಿಕೊಡುತ್ತಾರಾ? ಭೂ ಪರಿವರ್ತನೆ ಮಾಡಿದ್ದೀರಿ ಅಲ್ಲವೇ? ಅದು ಯಾರ ಭೂಮಿ? ಆ ವ್ಯಕ್ತಿ ಸತ್ತು 25 ವರ್ಷವಾಗಿದೆ. ಸತ್ತಿರುವ ವ್ಯಕ್ತಿಯ ಹೆಸರಲ್ಲಿ ಡಿನೋಟಿಫಿಕೇಷನ್ ಮಾಡಿದ್ದೀರಿ. ಸತ್ತಿರುವ ಲಿಂಗನ ಹೆಸರಲ್ಲಿ ಡಿನೋಟಿಫಿಕೇಷನ್ ಮಾಡಿಸಿದ್ದು ಯಾರು? ಎಂದು ಸಚಿವರು ಪ್ರಶ್ನಿಸಿದರು.