ಬೆಂಗಳೂರು- ಮುಂದಿನ ವಾರ ಮತ್ತಷ್ಟು ಮಳೆಯಾಗುವ ಮುನ್ಸೂಚನೆಯಿದ್ದು, ಎಚ್ಚರಿಕೆ ವಹಿಸಲು ಹಲವು ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಹಾನಿ ಕುರಿತು ಇಂದು ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಕಾಲಾವಧಿಯಲ್ಲಿ ಪೂರ್ಣ ಮನೆ ಹಾಳಾಗಿದ್ದರೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ನಿರ್ಣಯ ಮಾಡಲಾಗಿದ್ದು, ಅದು ದುರುಪಯೋಗವಾಗಿತ್ತು ಮತ್ತು ಎಲ್ಲರಿಗೂ ಪರಿಹಾರ ಸಿಗಲಿಲ್ಲ . ಮೊದಲ ಎರಡು ಕಂತುಗಳ ಹಣ ಬಿಡುಗಡೆಯಾದರೆ ಮೂರನೇ ಕಂತಿನ ಹಣ ಬಿಡುಗಡೆಯಾಗಲಿಲ್ಲ ಎಂದರು.
ಈಗ ನಮ ಸರ್ಕಾರ ಪೂರ್ಣ ಮನೆ ಹಾನಿಯಾಗಿದ್ದರೆ, 1,20,000 ರೂ. ಪರಿಹಾರದ ಜೊತೆಗೆ ಮನೆಯನ್ನು ಕಟ್ಟಿಸಿಕೊಡುತ್ತೇವೆ ಎಂದು ಹೇಳಿದರು.ರಾಜ್ಯದಲ್ಲಿ ಮೈಸೂರು, ಕೊಡಗು, ಹಾಸನ ಜಿಲ್ಲೆಗಳಲ್ಲಾಗಿರುವ ಮಳೆಹಾನಿಯನ್ನು ಪರಿಶೀಲನೆ ನಡೆಸಲಾಗಿದೆ.
ಮನೆ ಬಿದ್ದು ಹೋಗಿರುವುದು, ಜೀವಹಾನಿ, ವಿದ್ಯುತ್ ಕಂಬ ಬಿದ್ದಿರುವುದು, ವಿದ್ಯುತ್ತ ಕಂಬಗಳ ದುರಸ್ತಿ ಸೇರಿದಂತೆ ಹಲವು ರೀತಿಯ ಪರಿಹಾರ ಕಾರ್ಯಗಳನ್ನು ಆರಂಭಿಸಲಾಗಿದೆ ಎಂದರು.40 ದಿನಗಳಿಂದಲೂ ನಿರಂತರವಾಗಿ ಮಳೆಯಾಗುತ್ತಿದೆ. ಅಂಗನವಾಡಿಗೆ ರಜೆ ಘೋಷಿಸಲಾಗಿದೆ. ಶಾಲೆಗಳಲ್ಲಿ ಹತ್ತು ದಿನ ರಜೆ ನೀಡಿದ್ದು, ಅಗತ್ಯವಾದರೆ ಮತ್ತುಷ್ಟು ದಿನ ರಜೆ ನೀಡಲಾಗುವುದು ಎಂದು ಹೇಳಿದರು.
ಮುಂದಿನ ವಾರ ಮಳೆ ಹೆಚ್ಚಾಗುವುದರಿಂದ ಕಂದಾಯ, ಅರಣ್ಯ, ಜಲಸಂಪನೂಲ, ಇಂಧನ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.
ಖಾನಾಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪದೇ ಪದೇ ಹಳ್ಳಿಗಳು ಮುಳುಗಡೆಯಾಗುತ್ತಿರುವುದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ನಮ ಸರ್ಕಾರ ಬಧ್ಧವಾಗಿದೆ. ಜನರೂ ಕೂಡ ಇದಕ್ಕೆ ಸಹಕರಿಸಬೇಕು. ಪುನರ್ ವಸತಿಗಾಗಿ ನಿರ್ಮಿಸಲಾದ ಸ್ಥಳಗಳಿಗೆ ಮುಳುಗಡೆಯ ಪ್ರದೇಶದ ಜನ ಸ್ಥಳಾಂತರಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಗೃಹಲಕ್ಷ್ಮಿ ಹಣ ಶೀಘ್ರ ಬಿಡುಗಡೆ :
ಗೃಹಲಕ್ಷ್ಮಿ ಯೋಜನೆಯಡಿ ಮೇವರೆಗೂ ಮಹಿಳೆಯರಿಗೆ ತಲಾ 2 ಸಾವಿರ ರೂ. ಹಣ ಪಾವತಿಸಲಾಗಿದೆ. ಜೂನ್ ತಿಂಗಳಿನಿಂದ ಬಾಕಿ ಇದೆ. ಅದನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದರು.
ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದರೆ. ತಮ ವಿರುದ್ಧ ನೀಡಿರುವ ದೂರನ್ನು ತಿರಸ್ಕರಿಸುವಂತೆ ಈಗಾಗಲೇ ಸಂಪುಟದ ನಿರ್ಧಾರವನ್ನು ರಾಜ್ಯಪಾಲರಿಗೆ ತಿಳಿಸಲಾಗಿದೆ. ರಾಜ್ಯಪಾಲರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದುನೋಡುತ್ತೇವೆ. ಈವರೆಗೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಕೀಯ ಹಾಗೂ ಕಾನೂನಾತಕವಾಗಿ ಹೋರಅಟ ನಡೆಸಲು ನಾವು ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.