ಜಿ.ಎಸ್. ಬಸವರಾಜು ಆ ಕೆಲಸಕ್ಕೆ ಕೈ ಇಟ್ಟಾಗ ಎಡವಟ್ಟಾಗಿತ್ತಂತೆ : ನೂತನ ಸಚಿವ ಸೋಮಣ್ಣ ಹಿಂಗ್ಯಾಕಂದ್ರು?

ತುಮಕೂರು:- ಇಡೀ ದೇಶದಲ್ಲಿ ವಸಂತನರಸಾಪುರ, ದಾಬಸ್ ಪೇಟೆ, ಶಿರಾ ಈ ಮೂರು ಕೈಗಾರಿಕಾ ಪ್ರದೇಶಗಳು ಸೌತ್ ಏಷಿಯಾದಲ್ಲೇ ನಂಬರ್ 1 ಆಗುತ್ತಿದೆ. ಅದರ ದೃಷ್ಟಿಯಿಂದಲೇ ಇಲ್ಲೆ ಏರ್ ಪೋರ್ಟ್ ತರಬೇಕು ಅಂತಾ ತೀರ್ಮಾನ ಆಗಿತ್ತು‌. ಪ್ರಕ್ರಿಯೆ ಆಗಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಹೊಸೂರುನಲ್ಲಿ ಏರ್ ಪೋರ್ಟ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಹಾಗಾಗಿ ಸಂಬಂಧಿಸಿದವರ ಜೊತೆ ಮಾತನಾಡಿ ಏರ್ ಪೋರ್ಟ್ ಮಾಡುವುದಕ್ಕೆ ಕ್ರಮವಹಿಸಲಾಗುವುದು ಎಂದು ನೂತನ ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದರು.

ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಔಪಚಾರಿಕ ಮಾತುಗನ್ನಾಡಿದ ವಿ. ಸೋಮಣ್ಣ ಅವರು, ಜಿ.ಎಸ್. ಬಸವರಾಜು ಅವರು ಸಂಸದರಾಗಿದ್ದಾಗ ವಸಂತನರಸಾಪುರ ಭಾಗಕ್ಕೆ ಸಂಬಂಧಿಸಿದಂತೆ ರಿಂಗ್ ರಸ್ತೆ ಮಾಡುವುದಕ್ಕೆ ಮಾಡಿದ್ದರು. ಅದು ಒಂದು ಹಂತಕ್ಕೆ ಬಂದಿತ್ತು. ಅದು ಏನೋ ಒಂದು ಯಡವಟ್ಟಾಗಿತ್ತು. ಈಗ ಈ ರಿಂಗ್ ರಸ್ತೆ ಯೋಜನೆ ಯಡವಟ್ಟಾಗಿದೆ. ಅದನ್ನು ಬಗೆಹರಿಸುವುದಕ್ಕೆ ಸಂಬಂಧಿಸಿದವರ ಜೊತೆ ಮಾತನಾಡಿದ್ದೇವೆ. ಆ ಯಡವಟ್ಟನ್ನ ಸರಿಪಡಿಸುತ್ತೇನೆ ಎಂದರು.

ಶಿವಮೊಗ್ಗದಿಂದ ಚೆನ್ನೈವರೆಗೆ ರೈಲು ಸಂಚಾರವನ್ನು ಶುರು ಮಾಡಿಸಿದ್ದೇನೆ. ಜೊತೆಗೆ ಒಂದೇ ಭಾರತ್ ರೈಲನ್ನು ಸಹ ತುಮಕೂರು ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತಿದ್ದೇನೆ. ಡಬಲಿಂಗ್ ರೈಲ್ವೆ ಹಳಿಗೆ ಹೊಸ ವ್ಯವಸ್ಥೆ ತರುತ್ತಿದ್ದೇವೆ. ಬೆಂಗಳೂರಿಗೆ ಯಾವೆಲ್ಲಾ ಅಭಿವೃದ್ಧಿ ಕೆಲಸಗಳು ಆಗಿವೆ. ಅವೆಲ್ಲವನ್ನೂ ಸಹ ತುಮಕೂರಿಗೂ ತರುವ ಚಿಂತನೆಯಿದೆ.‌ ನನ್ನ ಅನುಭವವನ್ನು ಈ ಭಾಗದ ಅಭಿವೃದ್ಧಿಗೆ, ಜನರಿಗೆ ಕೊಡುತ್ತೇನೆ ಎಂದು ನುಡಿದರು‌.

ತುಮಕೂರು ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗಿದ್ದರೂ ತುಮಕೂರಿಗೆ ಬಂದು ನೆಲೆಸಿ ವಾಸ ಮಾಡುವಂತಹ ವ್ಯವಸ್ಥೆ ಇನ್ನೂ ಸಹ ಆಗಬೇಕಿದೆ. ಹಾಗಾಗಿ ಇಲ್ಲಿ ಜನರು ಬಂದು ನೆಲೆಸಬೇಕು ಅಂತಹ ವಾತಾವರಣದ ಅಭಿವೃದ್ಧಿ ಮಾಡುತ್ತೇನೆ. ಮತ್ತೊಂದು ದೊಡ್ಡ ಕೆಲಸಕ್ಕೆ ಚಿಂತನೆ ನಡೆಸಿದ್ದೇನೆ. ಅದು ಡಿಪಿಆರ್ ಆಗೊವರೆಗೂ ಹೇಳುವುದಿಲ್ಲ. ನೆಲಮಂಗಲ ಮಾಧಾವರದಿಂದ ಶಿರಾಗೇಟ್ ವರೆಗೂ 46 ಕಿಮೀ ಆಗುತ್ತದೆ. ಈ 46 ಕಿಮೀ ಬರಬೇಕಾದರೆ ಒಂದೂವರೆ ಗಂಟೆಯಾಗುತ್ತದೆ. ಹಾಗಾಗಿ ಅದಕ್ಕೆ ಬೇರೆ ರೂಪ‌ ಕೊಡುವ ಯೋಜನೆ ಹಾಕಿಕೊಂಡಿದ್ದೇನೆ. ಮೆಟ್ರೊ ಜೊತೆಗೆ ಹೊಸ ರೂಪ ಕೊಡಲಾಗುವುದು ಎಂದರು‌.

ಮೋದಿ ಅವರ ಸರ್ಕಾರ ಬೇಕು ಹಾಗೂ ಸೋಮಣ್ಣ ಅವರ ಕೆಲಸಗಾರ ಅನ್ನುವುದು ಕನಿಷ್ಟ 2%ರಷ್ಟು ಜನ ನನ್ನನ್ನು ಆರಿಸಿ ಕಳಿಸಿದ್ದಾರೆ. ಆ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆಯ ನುಡಿಗಳನ್ನಾಡಿದರು.

ನರೇಗಾ, ಜಲಜೀವನ್ ಮಿಷನ್ ಯೋಜನೆ ಸೇರಿಯ ಇನ್ನಿತರೆ ಯೋಜನೆಗಳ ಪ್ರಗತಿ ಕುರಿತು ಸೋಮವಾತ ರಾಜ್ಯ ಮಟ್ಟದ ಸಭೆ ನಡೆಸಲಾಗುವುದು. ಮಂಗಳವಾರ, ಬುಧವಾರ, ಗುರುವಾರ ಜಲಶಕ್ತಿ ಯೋಜನೆಯ ಪ್ರಗತಿ ಕುರಿತು ಕ್ಯಾಬಿನೆಟ್ ಮಂತ್ರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಯುತ್ತದೆ. ಅದರಲ್ಲಿ ನೀರಾವರಿ ಯೋಜನೆ ಕುರಿತ ಪ್ರಗತಿಯನ್ನು ಪರಿಶೀಲಿಸಲಾಗುವುದು ಎಂದರು.

ಸೋಮವಾರದಿಂದ ಗುರುವಾರದವರೆಗೆ ದೆಹಲಿಯಲ್ಲಿ ಕೂತು ಸರ್ಕಾರಿ ಕೆಲಸ ಮಾಡಬೇಕು. ಶುಕ್ರವಾರದಿಂದ ಕ್ಷೇತ್ರ ಸಂಚಾರ ಸೇರಿ ಇತರೆ ಕೆಲಸಗಳನ್ನು ಮಾಡಬೇಕು ಎಂದು ಪ್ರಧಾನಮಂತ್ರಿಗಳು ಸೂಚಿಸಿದ್ದಾರೆ. ಕನಿಷ್ಟ ಒಂದು ವರ್ಷದ ಕಾರ್ಯನಿರ್ವಹಣೆಯಲ್ಲಿ ನೀವೆ ನಿಮ್ಮ ಇಲಾಖೆಯನ್ನು ನಿರ್ವಹಣೆ ಮಾಡುವ ಜವಾಬ್ದಾರಿಗೆ ತರಬೇಕು ಎಂದು ಸೂಚಿಸಿದ್ದಾರೆ ಎಂದರು.

ಒಟ್ಟಾರೆ ಕರ್ನಾಟಕ ಸೇರಿದಂತೆ ಇಡಿ ರಾಷ್ಟ್ರದಲ್ಲಿ ರೈಲ್ವೆ ಯೋಜನೆಗೆ ಒತ್ತು ಕೊಡಲಾಗುವುದು. ರೈಲ್ವೆ ಇಲಾಖೆಯಲ್ಲಿ ಕಳೆದ ಹತ್ತು ವರ್ಷದ ಅಭಿವೃದ್ಧಿ ಮತ್ತು ಹಿಂದಿನ 30 ವರ್ಷದ ಅಭಿವೃದ್ಧಿ ತಾಳೆ ಮಾಡಿ ಅದನ್ನು ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇನೆ. ಅಭಿವೃದ್ಧಿಯಾಗಬೇಕಾಗಿದೆ. ಚುನಾವಣೆ ಮುಗಿದಿದೆ. ಅಲ್ಲಿಯವರೆಗೂ ಸಹ ನಾನು ಅಭಿವೃದ್ಧಿಗೆ ಒತ್ತು ಕೊಡುತ್ತೇನೆ ಎಂದರು.

ಈ ಬಾರಿಯ ಬಜೆಟ್ ನಲ್ಲಿ ಎನಾದರೂ ಸೇರಿಸುವುದಿದ್ದರೆ ಸಲಹೆ ಕೇಳಿದ ವಿ. ಸೋಮಣ್ಣ ಅವರು ತುಮಕೂರು ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡಿದ್ದೇನೆ. ಇದಕ್ಕಾಗಿ 100 ಕೋಟಿ‌ ಖರ್ಚು ಮಾಡಲಾಗುತ್ತಿದೆ ಎಂದರು.

Leave a Reply

Your email address will not be published. Required fields are marked *