ಹಾಸನ : ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿಯಾಗಿರುವ ಮತ್ತೊಂದು ಘಟನೆ ಹಾಸನದಲ್ಲಿ ನಡೆದಿದೆ. ಚಿರಂತ್ಗೌಡ (6) ಮೃತ ಬಾಲಕನಾಗಿದ್ದು, ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಿದ್ದಾನೆ.
ಹೊಳೆನರಸೀಪುರ ತಾಲೂಕಿನ ದೊಡ್ಡಳ್ಳಿ ಗ್ರಾಮದ ನಂದಿನಿ- ಸೋಮಶೇಖರ್ ದಂಪತಿ ಪುತ್ರ ಚಿರಂತ್ಗೌಡ ಕಳೆದ ಮಂಗಳವಾರದಿಂದ ಜ್ವರದಿಂದ ಬಳಲುತ್ತಿದ್ದ. ಕೆ. ಆರ್ ನಗರ ತಾಲೂಕಿನ ಬೇರ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.
ಗುಣಮುಖವಾಗದ ಹಿನ್ನೆಲೆ ಕೆ. ಆರ್ ನಗರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಾಲಕನ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಮತ್ತೆ ಮೈಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಚಿರಂತ್ಗೌಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಹಳ್ಳಿ ಮೈಸೂರು ಶಾಲೆಯಲ್ಲಿ ಚಿರಂತ್ಗೌಡ ಯುಕೆಜಿ ಓದುತ್ತಿದ್ದು, ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಡೆಂಗ್ಯೂವಿನಿಂದ ಹೊಳೆನರಸೀಪುರ ತಾಲೂಕಿನಲ್ಲಿಯೇ ಮೂರು ಮಂದಿ ಬಾಲಕರು ಮತ್ತು ಓರ್ವ ವೈದ್ಯಕೀಯ ವಿದ್ಯಾರ್ಥಿ ಕುಶಾಲ್ (22) ಸೇರಿ ಈಗಾಗಲೇ 4 ಮಂದಿ ಸಾವಿಗೀಡಾಗಿದ್ದು, ತಾಲೂಕಿನಲ್ಲಿ ಆತಂಕ ಮನೆ ಮಾಡಿದೆ