ಪ್ರಿಯಾಂಕಾ ಬೆಳೂರಿನ ಬಸ್ ನಿಲ್ದಾಣದಿಂದ ಕಣ್ಮರೆ; ಶೋಧ ಕಾರ್ಯಾಚರಣೆ ಜೋರಾಗಿ.
ಹಾಸನ: ಮದುವೆಗೆ ಬಂದಿದ್ದ ಮಹಿಳೆ ನಿಗೂಢವಾಗಿ ನಾಪತ್ತಯಾದ ಘಟನೆ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ. ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಪ್ರಿಯಾಂಕಾ (29) ಎಂಬ ಮಹಿಳೆ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ಮದುವೆಗೆ ಆಗಮಿಸಿದ್ದ ವೇಳೆ ಕಾಣೆಯಾಗಿದ್ದಾರೆ. ಫೆಬ್ರವರಿ 12ರ ರಾತ್ರಿ 8 ಗಂಟೆ ಸುಮಾರಿಗೆ ಹಾಸನ ಜಿಲ್ಲೆಯ ಬೇಲೂರು ಬಸ್ ನಿಲ್ದಾಣದ ಬಳಿಯಿಂದ ಅವರು ನಿಗೂಢವಾಗಿ ಕಣ್ಮರೆಯಾಗಿರುವುದು ತಿಳಿದುಬಂದಿದೆ.
ಕಾಣೆಯಾಗುವ ಮುನ್ನ ಸಂಜೆ 7.30ರ ಸುಮಾರಿಗೆ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದ ಪ್ರಿಯಾಂಕಾ, ‘ಯಾರೋ ಒಬ್ಬರ ಜೊತೆಯಲ್ಲಿ ಸಿಕ್ಕಿದ್ದೇನೆ’ ಎಂದು ಹೇಳಿ ಫೋನ್ ಕಟ್ ಮಾಡಿದ್ದರು. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ. ಈ ಕುರಿತು ದೂರು ನೀಡಲು ಮುಂದಾದರೂ ಪೊಲೀಸರು ತಕ್ಷಣ ಸ್ಪಂದಿಸಿಲ್ಲ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಕಲ್ಕೆರೆ ಸಮೀಪ ಒಳ ಉಡುಪು, ಚಪ್ಪಲಿ, ಬ್ಯಾಗ್ ಪತ್ತೆ
ಇನ್ನೊಂದೆಡೆ, ಬೇಲೂರು ತಾಲೂಕಿನ ಕಲ್ಕೆರೆ ಸಮೀಪ ಮಹಿಳೆಯ ಒಳ ಉಡುಪು, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿದ್ದು, ಪ್ರಕರಣದ ಬಗ್ಗೆ ಮತ್ತಷ್ಟು ಸಂಶಯ ಮೂಡುವಂತೆ ಮಾಡಿದೆ. ಸ್ಥಳದಲ್ಲಿ ಮೊದಲ ದಿನ ಯಾವುದೇ ಬಟ್ಟೆಗಳು ಕಾಣಿಸದಿದ್ದರೂ, ಬಳಿಕ ಅವು ಪತ್ತೆಯಾಗಿರುವುದರಿಂದ ಅನುಮಾನಗಳು ಹೆಚ್ಚಿವೆ ಎಂದು ಸ್ಥಳೀಯರು ಹೇಳಿದ್ದಾರೆ.
ಮಹಿಳೆ ಸುಮಾರು 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಧರಿಸಿದ್ದಾಗಿ ತಿಳಿದುಬಂದಿದ್ದು, ಆಭರಣಗಳಿಗಾಗಿ ಅಪಹರಣ ಅಥವಾ ದೌರ್ಜನ್ಯ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು, ಶ್ವಾನ ದಳ ಹಾಗೂ ಫೋರೆನ್ಸಿಕ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ.
ಪ್ರಿಯಾಂಕಾ ಕುಟುಂಬ ಸದಸ್ಯರು ಅರೆಹಳ್ಳಿ ಪೊಲೀಸ್ ಠಾಣೆ ಮತ್ತು ಬೇಲೂರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ದೂರು ಸ್ವೀಕರಿಸಿ ತನಿಖೆ ಕೈಗೊಂಡಿದ್ದರೆ ಮಹಿಳೆಯನ್ನು ಪತ್ತೆಹಚ್ಚಬಹುದಿತ್ತು ಎಂದು ಆರೋಪಿಸಿದ್ದಾರೆ. ಸದ್ಯ ಮಹಿಳೆಯ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ಮುಂದುವರಿದಿದೆ.
For More Updates Join our WhatsApp Group :




