ಹಾವೇರಿ: ನಿರಂತರ ಮಳೆಗೆ ಮನೆ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವಣೂರಿನ ಮಾದಾಪುರ ಗ್ರಾಮದಲ್ಲಿ ಇಂದು ನಸುಕಿನ ಜಾವ ನಡೆದಿದೆ. ಮೃತರನ್ನು ಅತ್ತೆ ಚನ್ನಮ್ಮ(30) ಹಾಗು 2 ವರ್ಷದ ಅವಳಿ ಮಕ್ಕಳಾದ ಅಮೂಲ್ಯ ಮತ್ತು ಅನುಶ್ರೀ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಮುತ್ತಪ್ಪ ಮತ್ತು ಅವರ ಪತ್ನಿ ಸುನೀತಾ ಹಾಗೂ 70 ವರ್ಷದ ಯಲ್ಲಮ್ಮ ಗಾಯಗೊಂಡಿದ್ದು, ಸವಣೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಯಲ್ಲಮ್ಮ ಪರಿಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಮೃತ ಅವಳಿ ಮಕ್ಕಳು ಗಾಯಗೊಂಡಿರುವ ಮುತ್ತಪ್ಪ ಮತ್ತು ಸುನೀತಾ ದಂಪತಿಯ ಪುತ್ರಿಯರಾಗಿದ್ದಾರೆ. ಮನೆಯಲ್ಲಿ ಮಲಗಿದ್ದ ವೇಳೆ ನಸುಕಿನ ಜಾವ 3.30 ಸುಮಾರಿಗೆ ಮನೆ ಕುಸಿದು ಅವಘಡ ಸಂಭವಿಸಿದೆ. ಘಟನೆ ನಡೆದ ಸ್ಥಳ ಹುಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದೆ.