ಉತ್ತರ ಕನ್ನಡ: ಜಿಲ್ಲೆಯಲ್ಲಿ ವರುಣ ಎಡಬಿಡದೇ ಆರ್ಭಟಿಸುತ್ತಿದ್ದಾನೆ. ಮಂಗಳವಾರ ಸಂಜೆಯ ವೇಳೆಗೆ ಕಾರವಾರ, ಕುಮಟಾ ತಾಲೂಕುಗಳಲ್ಲಿ ತಲಾ 6 ಮತ್ತು ಹೊನ್ನಾವರ ತಾಲೂಕಿನಲ್ಲಿ 14 ಸೇರಿದಂತೆ ಒಟ್ಟು 26 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಇವುಗಳಲ್ಲಿ 2,368 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.
ಕಾಳಜಿ ಕೇಂದ್ರಗಳನ್ನು ಆಶ್ರಯಿಸಿರುವ ಜನರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಊಟ, ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ ಮತ್ತು ಅಗತ್ಯವಿರುವ ಔಷಧ ಸೌಲಭ್ಯ ನೀಡಲಾಗುತ್ತಿದೆ.
22 ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 3 ಮನೆಗಳು ಪೂರ್ಣ ಹಾನಿಗೊಳಗಾಗಿವೆ. ಇನ್ನುಳಿದಂತೆ ಒಂದು ಮನೆಗೆ ತೀವ್ರ ಹಾನಿ ಹಾಗು 18 ಮನೆಗಳಿಗೆ ಭಾಗಶ: ಹಾನಿಯಾಗಿದೆ.
ಕಾರವಾರದಲ್ಲಿ ಓರ್ವ ಸಾವು: ಕಾರವಾರ ತಾಲೂಕಿನಲ್ಲಿ ಮನೆ ಕುಸಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅಂಕೋಲ ತಾಲೂಕಿನ ಶಿರೂರು ಗ್ರಾಮದಲ್ಲಿ ಭೂ ಕುಸಿತ ಸಂಭವಿಸಿದೆ. ಈ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆಯ 2 ತಂಡಗಳು ರಕ್ಷಣಾ ಕಾರ್ಯಚರಣೆ ನಡೆಸುತ್ತಿವೆ.
ಗುಡ್ಡ ಕುಸಿದು ರಸ್ತೆಗಳಿಗೆ ಹಾನಿ: ಹಲವೆಡೆ ಗುಡ್ಡ ಕುಸಿತದಿಂದ ರಸ್ತೆ ಸಂಪರ್ಕಕ್ಕೆ ತೊಂದರೆಯಾಗಿದೆ. ರಸ್ತೆ ದುರಸ್ತಿ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.
ನದಿಗುರುಳಿದ ಗ್ಯಾಸ್ ಟ್ಯಾಂಕರ್‌ಗಳು: ಅಂಕೋಲಾದ ಶಿರೂರು ಗ್ರಾಮದಲ್ಲಿ ಸಂಭವಿಸಿರುವ ಭೂ ಕುಸಿತದ ವೇಳೆ ಎರಡು ಗ್ಯಾಸ್ ಟ್ಯಾಂಕರ್‌ಗಳು ಗಂಗಾವಳಿ ನದಿಗೆ ಉರುಳಿ ಬಿದ್ದಿವೆ. ಈ ಟ್ಯಾಂಕರ್‌ಗಳು ಸೋರಿಕೆಯಾಗುವ ಸಾಧ್ಯತೆ ಇದ್ದು, ನದಿ ದಡದಲ್ಲಿರುವ ಮನೆಗಳಲ್ಲಿ ವಾಸವಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ.
ಗುಡ್ಡ, ನದಿ, ಹಳ್ಳ, ಕೆರೆ ಸಮೀಪದಲ್ಲಿ ವಾಸಿಸುತ್ತಿರುವ ಜನ ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.