ಬೆಂಗಳೂರು: ಮುಂದಿನ ಎರಡು ದಿನಗಳ ಕಾಲ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ನೈಋತ್ಯ ಮಾನ್ಸೂನ್ (ಜೂನ್ 1) ಆರಂಭವಾದಾಗಿನಿಂದ ಆಗಸ್ಟ್ 30 ರವರೆಗೆ ರಾಜ್ಯದಲ್ಲಿ ಶೇ. 20 ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ.
ಬೆಂಗಳೂರಿನ ಐಎಂಡಿ ನಿರ್ದೇಶಕ ಎನ್ ಪುವಿಯರಸನ್ ಮಾತನಾಡಿ, ಜುಲೈನಲ್ಲಿ ಭಾರಿ ಮಳೆಯಾಗಿದೆ. ಆದರೆ ಆಗಸ್ಟ್ ನಲ್ಲಿ ಸಾಮಾನ್ಯ ಮಳೆಯಾಗಿದೆ ಎಂದು ವಿವರಣೆ ನೀಡಿದ್ದಾರೆ. IMD ಪ್ರಕಾರ, ಮುಂದಿನ ಎರಡು ದಿನಗಳ ಕಾಲ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ. ನಂತರ ಮಳೆ ಕಡಿಮೆಯಾಗಲಿದೆ. ಬೆಂಗಳೂರಿನಲ್ಲಿ ಇನ್ನೆರಡು ದಿನ ಸಾಧಾರಣ ಮಳೆಯಾಗಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. 35-45 ಕಿಮೀ ವೇಗದಲ್ಲಿ ಗಾಳಿ ಬೀಸುವುದರೊಂದಿಗೆ 55 ಕಿಮೀ ವೇಗದಲ್ಲಿ ಬೀಸಲಿದೆ ಎಂದು ತಿಳಿಸಿದೆ.
ಉತ್ತರ ಆಂಧ್ರ ಪ್ರದೇಶ ಮತ್ತು ದಕ್ಷಿಣ ಒಡಿಶಾದ ಪಶ್ಚಿಮ ಮಧ್ಯ ಮತ್ತು ಪಕ್ಕದ ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವಿದ್ದು, ಮುಂದಿನ 36 ಗಂಟೆಗಳಲ್ಲಿ ಪಶ್ಚಿಮ ಮಧ್ಯ ಮತ್ತು ಪಕ್ಕದ ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದೆ ಎಂದು IMD ತಿಳಿಸಿದೆ.