ಚಿಕ್ಕಮಗಳೂರು : ರಾಜ್ಯದಾದ್ಯಂತ ಭಾರೀ ಮಳೆಯಾಗ್ತಿದೆ. ಮಲೆನಾಡು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಶೃಂಗೇರಿ ,ಕಳಸ, ಮೂಡಿಗೆರೆ, ಕೊಪ್ಪ, NR ಪುರ ಭಾಗಗಳಲ್ಲಿ ಕೂಡ ಬಿರುಗಾಳಿ ಸಹಿತ ಧಾರಾಕಾರವಾಗಿ ಮಳೆಯಾಗುತ್ತಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಶೃಂಗೇರಿಯಲ್ಲಿ ನೆರೆ ಆತಂಕ ಹೆಚ್ಚಿದೆ. ಶೃಂಗೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಕಾರವಾಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗ್ತಿದೆ. ಚಿಕ್ಕಮಗಳೂರಿನಲ್ಲಿ ಮಳೆಗೆ ಕೆರೆಕಟ್ಟಿ ಸಮೀಪದ ಶೃಂಗೇರಿ-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರ ಮೇಲೆ ಗುಡ್ಡ ಕುಸಿದಿದೆ. ರಸ್ತೆಗೆ ಮಣ್ಣು ಕುಸಿದಿರೋ ಹಿನ್ನೆಲೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಆಗಿದ್ದು, ವಾಹನ ಸವಾರರು ಪರದಾಡುವಂತೆ ಆಗಿದೆ.
ಶೃಂಗೇರಿ ಶಾರದಾ ಮಠದ ಸಮೀಪ ನದಿ ನೀರಿನ ಮಟ್ಟ ಹೆಚ್ಚುತ್ತಿರುವುದ್ರಿಂದ ನೆರೆ ಆತಂಕ ಹೆಚ್ಚಾಗಿದೆ. ತುಂಗಾ ನದಿಯ ನೀರಿನ ಪ್ರಮಾಣ ಏರಿಕೆಯಾಗಿದ್ದು, ಗಾಂಧಿ ಮೈದಾನದ ಪಾರ್ಕಿಂಗ್ ಪ್ರದೇಶಕ್ಕೆ ನುಗ್ಗಿದೆ. ರಾತ್ರಿ ಮಳೆ ಹೆಚ್ಚಾದರೆ ಶೃಂಗೇರಿ ಮಠದ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ಇದೆ. ಜಲಾವೃತವಾಗಿರುವ ಶೃಂಗೇರಿ ಮಠಕ್ಕೆ ಸಂಪರ್ಕಿಸುವ ಪರ್ಯಾಯ ರಸ್ತೆಯನ್ನು ಬಂದ್ ಮಾಡಲಾಗಿದೆ.
ಶೃಂಗೇರಿ ಮಠದ ಸಮೀಪದ ಗಾಂಧಿ ಮೈದಾನದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ತುಂಗಾ ನದಿಯ ನೀರು ನುಗ್ಗಿದೆ. ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರುಗಳು ಮುಳುಗಡೆಯಾಗಿದೆ. ಕಾರು ಅರ್ಧದಷ್ಟು ನೀರಿನಲ್ಲಿ ಮುಳುಗಿದೆ. ಶೃಂಗೇರಿ ಮಠಕ್ಕೆ ಬಂದಿದ್ದ ಪ್ರವಾಸಿಗರ ಕಾರುಗಳು ನೀರಿನಲ್ಲಿ ಮುಳುಗಿದ್ದು, ಸ್ಥಳೀಯರು ಮತ್ತು ಪೊಲೀಸರ ಸಹಕಾರದೊಂದಿಗೆ ಕೆಲವು ಕಾರುಗಳನ್ನು ಎತ್ತರದ ಪ್ರದೇಶಗಳಿಗೆ ತಳ್ಳಲಾಯಿತು.