ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಅಕ್ಟೋಬರ್ 4ರವರೆಗೆ ಭಾರೀ ಮಳೆಯಾಗಲಿದೆ. ವಾಯುಭಾರ ಕುಸಿತದಿಂದ ಮಳೆಯ ಆರ್ಭಟ ಜೋರಾಗಿದ್ದು, ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸೆಪ್ಟೆಂಬರ್ 30ರ ವೇಳೆಗೆ ಚಂಡಮಾರುತ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಬಂಗಾಳಕೊಲ್ಲಿಯ ಒಡಿಶಾ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರ ಪರಿಣಾಮದಿಂದ ಮಳೆ ಸ್ವಲ್ಪ ಚುರುಕಾಗಿದ್ದು, ರಾಜ್ಯದಲ್ಲಿ ಒಂದು ವಾರದ ಕಾಲ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿಯ ಮೀನುಗಾರರಿಗೆ ಅಲರ್ಟ್:
ಕರ್ನಾಟಕದ ಕರಾವಳಿಯಲ್ಲಿ ಇಂದು (ಭಾನುವಾರ) ಗಂಟೆಗೆ 50-60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಐಎಂಡಿಯ ಮಾಹಿತಿಯಂತೆ ಇಂದು ಅರಬ್ಬಿ ಸಮುದ್ರದಲ್ಲಿ ಮಳೆ ಮತ್ತು ಭಾರೀ ಗಾಳಿ ಬೀಸುವುದರಿಂದ ಸಮುದ್ರ ಪ್ರಕ್ಷುಬ್ಧವಾಗಿರುತ್ತದೆ.
ಬೆಂಗಳೂರಿನಲ್ಲೂ ಮಳೆ:
ಬೆಂಗಳೂರು ಸೇರಿದಂತೆ ಹಾವೇರಿ, ಧಾರವಾಡ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ಮೈಸೂರು, ಚಾಮರಾಜನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಮತ್ತು ಸೋಮವಾರ ಹಗುರ ಮಳೆಯಾಗಲಿದೆ. ಆದರೆ, ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಮಳೆ ಹೆಚ್ಚಾಗಲಿದೆ.
ಹಾಗೇ, ಉತ್ತರ ಕರ್ನಾಟಕದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಅಕ್ಟೋಬರ್ 2ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಯಾವ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್?
ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ದಕ್ಷಿಣ ಕನ್ನಡ, ಉಡುಪಿ, ಯಾದಗಿರಿ ಸೇರಿದಂತೆ ಒಟ್ಟು 8 ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ.
ಬೇರೆ ರಾಜ್ಯಗಳಲ್ಲೂ ಮಳೆ:
ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ನೆರೆಯ ರಾಜ್ಯಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ. ಒಡಿಶಾದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಆಂಧ್ರಪ್ರದೇಶದ ಕರಾವಳಿ, ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ. ಕೊಂಕಣ, ಗೋವಾ ಮತ್ತು ಮಧ್ಯ ಮಹಾರಾಷ್ಟ್ರದಲ್ಲಿ ಸೆಪ್ಟೆಂಬರ್ 30ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಹವಾಮಾನ ಇಲಾಖೆಯ ಪ್ರಕಾರ, ನೈಋತ್ಯ ಮಾನ್ಸೂನ್ ದೆಹಲಿ, ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಿಂದ ಮರಳಿದೆ.
For More Updates Join our WhatsApp Group :
