ಹಾಸನ: ಕರ್ನಾಟಕದ ಹಲವೆಡೆ ಮುಂಗಾರು ಮಳೆ ಅಬ್ಬರ ಮುಂದುವರೆದಿದೆ. ಪುನರ್ವಸು ಮಳೆಗೆ ನಲುಗಿದ ಹಾಸನ ಜನತೆಗೆ ಪುಷ್ಯ ಮಳೆಯೂ ಖುಷಿಯ ಜೊತೆಗೆ ಸಂಕಷ್ಟ ತಂದೊಡ್ಡಿದೆ. ನಿರಂತರವಾಗಿ 15 ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಾಸನ ಅಕ್ಷರಶಃ ನಲುಗಿದೆ. ಒಂದುಕಡೆ ಜೀವನದಿ ಹೇಮಾವತಿ ಮೈದುಂಬಿ ಹರಿಯುತ್ತಿದ್ದರೇ, ಮತ್ತೊಂದೆಡೆ ಜನ ಜೀನವ ಅಸ್ತವ್ಯಸ್ತವಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕಳೆದ 3 ದಿನಗಳಿಂದ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಷಿದೆ.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆ ಹಿನ್ನೆಲೆ ಸಕಲೇಶಪುರ, ಆಲೂರು, ಬೇಲೂರು, ಹೊಳೆನರಸೀಪುರ, ಅರಕಲಗೂಡು ಮತ್ತು ಹಾಸನ ತಾಲ್ಲೂಕಿನ ಶಾಲೆಗಳಿಗೆ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಇಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹೆಚ್.ಕೆ. ಪಾಂಡು ರಜೆ ಘೋಷಿಸಿದ್ದಾರೆ. ಅರೆ ಮಲೆನಾಡು ಎನಿಸಿಕೊಳ್ಳುವ ಅರಕಲಗೂಡು ಮತ್ತು ಹೊಳೆನರಸೀಪುರದಲ್ಲಿ ರಸ್ತೆಯ ಮಧ್ಯೆ ನೀರು ಹರಿಯುತ್ತಿದೆ. ಕಾರಣ ಹೇಮಾವತಿ ಜಲಾಶಯಕ್ಕೆ ಪ್ರತಿನಿತ್ಯ 65 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಜಲಾಶಯದಿಂದ 65 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಹೀಗಾಗಿ ಮೈದುಂಬಿ ಹರಿಯುತ್ತಿರುವ ನದಿಯಿಂದ ರಸ್ತೆ ಜಲಾವೃತವಾಗಿದೆ. ವಾಹನ ಸಂಚಾರವೂ ದುಸ್ತರವಾಗಿದೆ.
ಹಾಸನದಲ್ಲಿ ಕಳೆದ ಒಂದು ವಾರದಿಂದ ಭರ್ಜರಿ ಮಳೆಯಾಗುತ್ತಿದೆ. ಅಲ್ಲಲ್ಲಿ ಭೂಕುಸಿತದ ಭೀತಿ ಕೂಡ ಹೆಚ್ಚಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹೇಮಾವತಿ ಜಲಾಶಯಕ್ಕೆ ಒಳಹರಿವಿನ ಹೆಚ್ಚಳವಾಗಿದೆ. ಮಲೆನಾಡು ಅಕ್ಷರಶಃ ನಲುಗಿದೆ. ಅಪಾಯದ ಮಟ್ಟ ಮೀರಿ ಹೇಮಾವತಿ ನದಿ ಹರಿಯುತ್ತಿದೆ. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅರಕಲಗೂಡು ತಾಲ್ಲೂಕಿನ ಕಟ್ಟೇಪುರ ಅಣೆಕಟ್ಟು ಪ್ರದೇಶದಲ್ಲಿಯೂ ಪ್ರವಾಹ ಉಂಟಾಗುವ ಸಾಧ್ಯತೆಯಿದ್ದು, ಅಲ್ಲಿನ ಸ್ಥಳೀಯರಿಗೆ ದೂರದ ಪ್ರದೇಶಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದೆ.
ಹೊಳೆನರಸೀಪುರ-ಅರಕಲಗೂಡು ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಜಲಾಶಯದಿಂದ ಹೊರ ಬರುತ್ತಿರುವ ನೀರಿನಿಂದ ರಸ್ತೆಯ ಮಧ್ಯೆ ನೀರು ಹರಿಯುತ್ತಿದೆ. ರಸ್ತೆಯ ಪಕ್ಕದಲ್ಲಿರುವ ಅಗ್ನಿಶಾಮಕ ಠಾಣೆಗೆ ನೀರು ನುಗ್ಗಿರುವುದರಿಂದ ಅಲ್ಲಿನ ಸಿಬ್ಬಂದಿ ನೀರನ್ನು ಹೊರ ಹಾಕುವ ಸಾಹಸ ಮಾಡ್ತಿದ್ದಾರೆ. ಚನ್ನರಾಯಪಟ್ಟಣ ರಸ್ತೆಯ ಖಾಸಗಿ ಶಾಲೆಗೂ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಇನ್ನು ಜಲಾವೃತಗೊಂಡಿರುವ ಹೊಳೆನರಸೀಪುರ ಪಟ್ಟಣದ ಕೆಲ ಬಡಾವಣೆಗಳಿಗೆ ಸಂಸದ ಶ್ರೇಯಸ್ ಪಟೇಲ್ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಇನ್ನು ಆಲೂರು ತಾಲ್ಲೂಕಿನ ಬ್ಯಾಡರಹಳ್ಳಿಯಲ್ಲಿನ ರೈತ ಮೋಹನ್ ಎಂಬುವರ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿತ್ತು. ಆದ್ರೆ ನಿರಂತರ ಮಳೆಯಿಂದ ಅಂತರ್ಜಲ ಹೆಚ್ಚಳವಾಗಿ ಕೆಟ್ಟು ನಿಂತಿದ್ದ ಬೋರ್ವೆಲ್ನಿಂದ ಜೀವಜಲ ಉಕ್ಕಿಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಆತನ ಮೊಗದಲ್ಲಿ ಸಂತಸ ಮೂಡಿದೆ.
ಒಟ್ಟಿನಲ್ಲಿ ಕರಾವಳಿಯಲ್ಲಿ ಆಗುತ್ತಿರುವ ಮಳೆಯಬ್ಬರದ ರೀತಿಯಲ್ಲಿಯೇ ಮಲೆನಾಡಿನಲ್ಲಿಯೂ ವರುಣನ ಆರ್ಭಟ ಮುಂದುವರಿದಿದೆ. ಮಳೆಯಿಂದ ರಸ್ತೆ, ಗುಡ್ಡ ಕುಸಿದಿದ್ದು, ಸದ್ಯ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಿದ್ದಾರೆ. ಆದ್ರೆ ಮಳೆಯಿಂದ ಮೈದುಂಬಿದ ಹೇಮಾವತಿ ನೋಡಲು ಎರಡು ದಿನಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಸದ್ಯ ಭದ್ರತೆಯ ದೃಷ್ಠಿಯಿಂದ ಇಂದು ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ನೀಡಿದೆ.