ಕೇಂದ್ರದಿಂದ ಹೊಸ ಅಭಿವೃದ್ಧಿಯ ಸುಳಿವು.
ನವದೆಹಲಿ: ಕರ್ನಾಟಕಕ್ಕೆ ಮತ್ತೊಂದು ಹೈ ಸ್ಪೀಡ್ ರೈಲು ಕಾರಿಡಾರ್ ಕೊಡುಗೆಯ ಶುಭ ಸೂಚನೆ ಸಿಕ್ಕಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಒತ್ತಾಸೆ ಮೇರೆಗೆ ಕರ್ನಾಟಕದಲ್ಲಿ “ಬೆಂಗಳೂರು ಮತ್ತು ಪುಣೆ” ನಡುವೆ ಮತ್ತೊಂದು ಹೈ ಸ್ಪೀಡ್ ರೈಲು ಕಾರಿಡಾರ್ ಗೆ ಚಿಂತನೆ ನಡೆದಿದ್ದು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಒಂದು ವೇಳೆ ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೆ, ಈ ರೈಲು ಕಾರಿಡಾರ್ ನಿರ್ಮಾಣದಿಂದ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪ್ರಯೋಜನ ಆಗಲಿದೆ.
ರೈಲ್ವೆ ಸಚಿವರನ್ನ ಭೇಟಿ ಮಾಡಿದ ಜೋಶಿ
ಬೆಂಗಳೂರು ಮತ್ತು ಪುಣೆ ನಡುವೆ ಹೈ ಸ್ಪೀಡ್ ರೈಲು ಕಾರಿಡಾರ್ ನಿರ್ಮಾಣಕ್ಕಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಬುಧವಾರ ಬೆಳಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ಇದಕ್ಕೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸ್ವತಃ ಪ್ರಲ್ಹಾದ ಜೋಶಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರು-ಪುಣೆ ಮಧ್ಯೆ ಹೈ ಸ್ಪೀಡ್ ರೈಲು ಕಾರಿಡಾರ್ ನಿರ್ಮಾಣವಾದಲ್ಲಿ ಕರ್ನಾಟಕದ ಬಹುತೇಕ ಪ್ರದೇಶದ ಒಟ್ಟಾರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ಅವರು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಕರ್ನಾಟಕದ ಯಾವೆಲ್ಲಾ ಭಾಗಕ್ಕೆ ಅನುಕೂಲ
ಈ ರೈಲು ಕಾರಿಡಾರ್ ನಿರ್ಮಾಣದಿಂದ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪ್ರಯೋಜನ ಆಗಲಿದೆ. ರಾಜ್ಯದ ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಅಲ್ಲದೇ ಪುಣೆಯಿಂದ ಕರ್ನಾಟಕದ ಆರೇಳು ಜಿಲ್ಲೆಗಳಿಗೆ ತ್ವರಿತ ಪ್ರಯಾಣ, ಸಂಪರ್ಕ ಸಾಧ್ಯವಾಗಲಿದೆ.
ಹಾಗಾಗಿ ಇದೊಂದು ಹೊಸ ಹೈ ಸ್ಪೀಡ್ ರೈಲು ಕಾರಿಡಾರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ. ಜೋಶಿ ಅವರ ಮನವಿಗೆ ರೈಲ್ವೆ ಸಚಿವರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಭರವಸೆ ನೀಡಿದ್ದಾರೆ.
For More Updates Join our WhatsApp Group :




