ಹಿಮಾಚಲ ಪ್ರದೇಶ : ಸುರಿಯುತ್ತಿರುವ ಭಾರಿ ಮಳೆ, ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದಾಗಿ ಮಣಿಮಹೇಶ್ ಯಾತ್ರೆಗೆ ಆಗಮಿಸಿದ್ದ ಕನಿಷ್ಠ 16 ಭಕ್ತರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಮಣಿಮಹೇಶ್ ಕೈಲಾಶ್ ಪರಿಕ್ರಮದ ವೇಳೆ ಏಳು ಯಾತ್ರಿಕರು ಮತ್ತು ತೀರ್ಥಯಾತ್ರೆಯ ಮಾರ್ಗದ ವಿವಿಧ ಸ್ಥಳಗಳಲ್ಲಿ ಇತರ ಒಂಬತ್ತು ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ. ಪ್ರತಿಕೂಲ ವಾತಾವರಣದಿಂದಾಗಿ ನಾವು ಯಾತ್ರೆಯನ್ನು ದಿಢೀರ್ ಮುಗಿಸಬೇಕಾಯಿತು ಎಂದು ಜಿಲ್ಲಾಧಿಕಾರಿ ಮುಖೇಶ್ ರೆಪ್ಸ್ವಾಲ್ ತಿಳಿಸಿದ್ದಾರೆ.
ಇದುವರೆಗೆ 3,359ಕ್ಕೂ ಹೆಚ್ಚು ಭಕ್ತರನ್ನು ಚಂಬಾಗೆ ಮರಳಿ ಕರೆತರಲಾಗಿದೆ. ಆದಾಗ್ಯೂ, ಭೂಕುಸಿತಗಳಿಂದಾಗಿ ರಸ್ತೆಗಳು ತೀವ್ರವಾಗಿ ಹಾನಿಗೊಳಗಾಗಿದ್ದು, ರಕ್ಷಣಾ ಕಾರ್ಯಾಚರಣೆ ಅತ್ಯಂತ ಸವಾಲಿನಿಂದ ಕೂಡಿದೆ. 10 ಸಾವಿರಕ್ಕೂ ಹೆಚ್ಚು ಯಾತ್ರಿಕರು ಕಾಲ್ನಡಿಗೆಯಲ್ಲಿ ಕಲ್ಸುಯಿ ತಲುಪಿದ್ದರು. ಅಲ್ಲಿಂದ ರಾಜ್ಯ ಬಸ್ಸುಗಳು ಮತ್ತು ಖಾಸಗಿ ವಾಹನಗಳು ಅವರನ್ನು ಚಂಬಾ, ಪಠಾಣ್‌ಕೋಟ್ ಮತ್ತು ಜಮ್ಮುವಿಗೆ ಕರೆದೊಯ್ದವು. ಸುಮಾರು ನಾಲ್ಕು ಸಾವಿರ ಜನರು ಭರ್ಮೋರ್‌ನಲ್ಲಿ ಉಳಿದುಕೊಂಡಿದ್ದು, ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ ಎಂದು ತಿಳಿಸಿದರು.
ಎಡೆಬಿಡದೆ ಸುರಿಯುತ್ತಿದ್ದ ಮಳೆ ಮತ್ತು ಮಂಜು ಜನರನ್ನು ಸ್ಥಳಾಂತರ ಮಾಡಲು ಹೆಲಿಕಾಪ್ಟರ್ ಕಾರ್ಯಾಚರಣೆಗೆ ಅಡ್ಡಿಯಾಯಿತು. ಆದರೆ ಸಚುಯಿಯಿಂದ ಗೌರಿಕುಂಡ್‌ಗೆ ಭಕ್ತರನ್ನು ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ. ಹವಾಮಾನ ವೈಪರೀತ್ಯದಿಂದ ವಿಮಾನ ಹಾರಾಟ ಸಾಧ್ಯವಾಗಲಿಲ್ಲ ಎಂದು ಮಾಹಿತಿ ನೀಡಿದರು.
ನಮಗೆ ಮೇಲೆ ಹತ್ತಲು ಅಥವಾ ಇಳಿಯಲು ಸಾಧ್ಯವಾಗಲಿಲ್ಲ. ಅನೇಕರು ಆಹಾರ, ನೀರು, ಮೊಬೈಲ್ ನೆಟ್‌ವರ್ಕ್‌ಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿಕೊಂಡರು ಎಂದು ಯಾತ್ರಿಕರೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದರು. ಲುಧಿಯಾನದ ಭಕ್ತರಾದ ದೀಪಕ್ ಮತ್ತು ರಾಬಿನ್, ಭೂಕುಸಿತದ ನಂತರ ಎರಡು ದಿನಗಳ ಕಾಲ ಅಪಾಯಕಾರಿ ಮಾರ್ಗದಲ್ಲಿ ನಡೆಯಬೇಕಾಯಿತು ಎಂದು ತಾವು ಎದುರಿಸಿದ ಕಹಿ ಅನುಭವದ ಬಗ್ಗೆ ವಿವರಿಸಿದರು.