ಶಿವಮೊಗ್ಗ: ಗ್ಯಾರಂಟಿಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಗ್ಯಾರಂಟಿಗಳು ಐದು ವರ್ಷ ಮುಂದುವರಿಯುತ್ತದೆ. ಗ್ಯಾರಂಟಿ ನಿಲ್ಲಿಸುವ ಬಗ್ಗೆ ಪ್ರಶ್ನೆಯು ಕೇಳಬೇಡಿ ಎಂದು ಸಚಿವ ಮಧು ಬಂಗಾರಪ್ಪ ಅವರು ಸ್ಪಷ್ಟಣೆ ನೀಡಿದ್ದಾರೆ. ಇಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೂರನೇ ಬಾರಿ ಧ್ವಜಾರೋಹಣ ಮಾಡುತ್ತಿರೋದು.
ಬಹಳ ಹೆಮ್ಮೆ ಹಾಗೂ ಸಂತೋಷ ಆಗುತ್ತೆ ಎಂದು ಹೇಳಿದರು.
ಅಲ್ಲದೆ ಗ್ಯಾರಂಟಿಗಳನ್ನು ಕೈಬಿಡುವ ವಿಚಾರವಾಗಿ ಮಾತನಾಡಿದ ಅವರು, ‘ಗ್ಯಾರಂಟಿಗಳ ಬಗ್ಗೆ ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಟೀಕಾ ಟಿಪ್ಪಣಿ ಬಂತು. 9 ಕೋಟಿ ರೂ ಗ್ರಾಮ ಪಂಚಾಯತಿಗಳಿಗೆ ಗ್ಯಾರಂಟಿಯಿಂದ ಸಿಗುತ್ತಿದೆ. ಜನರ ತೆರಿಗೆ ಹಣದಲ್ಲಿ ಗ್ಯಾರಂಟಿ ನೀಡಲಾಗುತ್ತಿದೆ. 56 ಲಕ್ಷ ಮಕ್ಕಳಿಗೆ ಮೊಟ್ಟೆ ಕೊಡುವ ಯೋಜನೆ ಆರಂಭ ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳು ನಮ್ಮ ಸರ್ಕಾರ ಇರುವವರೆಗೂ ಇರುತ್ತವೆ’ ಎಂದು ಹೇಳಿದರು.
ಇದೇ ವೇಳೆ ಜಲಾಶಯಗಳ ರಿಪೇರಿ ಬಗ್ಗೆ ಮಾತನಾಡಿ, ‘ಇಡೀ ರಾಜ್ಯದಲ್ಲಿ ಉತ್ತಮ ಮಳೆ ಆಗಿದೆ. ಎಲ್ಲಾ ಜಲಾಶಯಗಳ ರಿಪೇರಿ ಇದ್ದರೆ ತ್ವರಿತವಾಗಿ ಮಾಡಬೇಕು. ಈಗಾಗಲೇ ಜಲಾಶಯಗಳ ಕುರಿತು ಸಭೆ ಮಾಡಿದ್ದೇವೆ. ತ್ವರಿತವಾಗಿ ಜಲಾಶಯಗಳ ದುರಸ್ತಿ ಇದ್ದರೆ ಮಾಡುತ್ತೇವೆ’ ಎಂದು ಹೇಳಿದರು.
ಇನ್ನೂ ಸಾಗುವಳಿ ಮಾಡಿಕೊಂಡು ಬಂದವರ ರಕ್ಷಣೆ ಮಾಡುವ ಕೆಲಸ ಮಾಡುತ್ತೇವೆ. 2015ರ ಪೂರ್ವದಲ್ಲಿ ಸಾಗುವಳಿ ಮಾಡಿದವರಿಗೆ ರಕ್ಷಣೆ ಕೊಡುತ್ತೇವೆ. ಕೇಂದ್ರ ಸರ್ಕಾರ ತಿರ್ಮಾನ ಮಾಡಿ ಅರಣ್ಯವಾಸಿಗಳಿಗೆ ಸಹಕಾರ ಮಾಡಬೇಕು ಎಂದು ಸೂಚನೆ ನೀಡಿದರು.
ಅನುದಾನಿತ ಶಾಲೆಗೆ ಅತಿಥಿ ಶಿಕ್ಷಕರ ನೇಮಕ
ನಮ್ಮ ಶಾಲೆ ನಮ್ಮ ಜವಾಬ್ದಾರಿ ಎನ್ನುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಅನುದಾನಿತ ಶಾಲೆಗಳು ಸರ್ಕಾರದ ಒಂದು ಅಂಗ, ವಿರೋಧ ಪಕ್ಷಗಳು ಆಡಳಿತದಲ್ಲಿದ್ದಾಗ ಏನು ಮಾಡಲಿಲ್ಲ. ಅನುದಾನಿತ ಶಾಲೆಗೆ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳ ಮಾಡಬೇಕು ಎಂದರು.
ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಪ್ರಾಣ ತ್ಯಾಗ ಮಾಡಿದ್ದಾರೆ. ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಬೇಕು. ಮಕ್ಕಳು ಶಾಲೆಗೆ ಬರುವುದು ಕಡಿಮೆ ಆಗುತ್ತಿದೆ. ಈ ಬಗ್ಗೆ ಪೋಷಕರು ಗಮನ ಹರಿಸಬೇಕು. ಶಾಲೆಗಳಲ್ಲಿನ ಸೌಲಭ್ಯಗಳ ಕೊರತೆ ಸರಿ ಮಾಡುತ್ತೇವೆ. ಸರ್ಕಾರ ಸದೃಢವಾಗಿ ಕೆಲಸ ಮಾಡುತ್ತಿದೆ ಎಂಬ ವಿಶ್ವಾಸ ನೀಡಿದರು.
ವಿಪಕ್ಷಗಳಿಗೆ ಟಾಂಗ್ ಕೊಟ್ಟ ಸಚಿವರು
ಶಿಮುಲ್ ಚುನಾವಣೆಯಲ್ಲಿ ನಮ್ಮ ಪಕ್ಷದವರು ಗೆದ್ದಿದ್ದಾರೆ. ನಮ್ಮ ಪಕ್ಷ ಶಿಮುಲ್ ನಲ್ಲಿ ಅಧಿಕಾರ ಹಿಡಿಯಲಿದೆ. ವರಿಷ್ಠರು ಒಗ್ಗಟಿನಿಂದ ಇರಿ ಎಂದಿದ್ದಾರೆ. ಈ ಬಿಜೆಪಿಯವರಿಗೆ ಅವರು ಹೋರಾಟ ಯಾಕೇ ಮಾಡಿದ್ದೇವೆ ಎನ್ನುವುದೇ ಅವರಿಗೆ ಗೊತ್ತಿಲ್ಲ. ಹೋರಾಟ ಮಾಡಿದವರ ಬ್ಯಾ ಗ್ರೌಂಡ್ ಓಡಿದರೆ ಎಲ್ಲರು ಕೇಸ್ ಇರುವವರೆ.
ಸರ್ಕಾರ ಐದು ವರ್ಷಗಳ ಆಡಳಿತದಲ್ಲಿರುತ್ತೆ. ಐದು ವರ್ಷವು ಗ್ಯಾರಂಟಿ ಮುಂದುವರಿಯುತ್ತೆ. ಬಿಜೆಪಿ 40% ಕಮಿಷನ್ ತಿಂದು ಕೆಲಸವೇ ಮಾಡಿಲ್ಲ. ಪಾದಯಾತ್ರೆ ಮಾಡಿದವರ ಕುಟುಂಬದವರೇ ಹೆಚ್ಚು ಗ್ಯಾರಂಟಿಗೆ ಅರ್ಜಿ ಹಾಕಿದ್ದಾರೆ. ಅಭಿವೃದ್ಧಿಯನ್ನು ಪೋಟೋ ಹಾಕಿ ತೋರಿಸುವುದಲ್ಲ. ಅಭಿವೃದ್ಧಿ ಮಾಡಿ ತೋರಿಸಬೇಕು ಎಂದು ವಿಪಕ್ಷಗಳಿಗೆ ಕುಟುಕಿದರು.