6 ತಿಂಗಳಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಹಂಚಿಕೆಯಾದ ತೆರಿಗೆ ಹಣವೆಷ್ಟು?

ಬೆಂಗಳೂರುಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದೆ ಎಂಬ ಕೂಗು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ‘ನಮ್ಮ ತೆರಿಗೆ ನಮ್ಮ ಹಕ್ಕು’ ಹೋರಾಟವನ್ನು ತೀವ್ರಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಕರ್ನಾಟಕವು ಸಂಗ್ರಹಿಸಿದ ಸಮಗ್ರ ಜಿಎಸ್​ಟಿ ಹಾಗೂ ಕೇಂದ್ರದಿಂದ ಬಿಡುಗಡೆಯಾದ ತೆರಿಗೆ ಹಂಚಿಕೆ ಮೊತ್ತ ಎಷ್ಟು? ಎಂಬ ವರದಿ ಇಲ್ಲಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಅಕ್ಟೋಬರ್ ತಿಂಗಳ ತೆರಿಗೆ ಹಂಚಿಕೆಯ ಮೊತ್ತವನ್ನು ಎಲ್ಲಾ ರಾಜ್ಯಗಳಿಗೆ ಬಿಡುಗಡೆ ಮಾಡಿದೆ. ಈ ಪೈಕಿ ಕರ್ನಾಟಕಕ್ಕೆ 6,498 ಕೋಟಿ ರೂ. ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಮತ್ತೆ ತೆರಿಗೆ ತಾರತಮ್ಯದ ಆರೋಪ ಮಾಡಿದೆ. ಕೇಂದ್ರವು ಕರ್ನಾಟಕಕ್ಕೆ ತೆರಿಗೆ ಅನ್ಯಾಯ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಸೇರಿ ಸಂಪುಟ ಸಚಿವರು ವಾಗ್ದಾಳಿ ನಡೆಸುತ್ತಿದ್ದಾರೆ. ರಾಜ್ಯದಿಂದ 4 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದ್ದರೂ, ಕೇಂದ್ರ ಸರ್ಕಾರ ಅತ್ಯಲ್ಪ ತೆರಿಗೆ ಹಂಚಿಕೆ ಹಣ ಬಿಡುಗಡೆ ಮಾಡುವ ಮೂಲಕ ತಾರತಮ್ಯ ಮಾಡುತ್ತಿದೆ ಎಂದು ದೂರಿದೆ.

15ನೇ ಹಣಕಾಸು ಆಯೋಗದ ಶಿಫಾರಸು ಆಧಾರದ ಮೇಲೆ ರಾಜ್ಯಗಳಿಗೆ ಕೇಂದ್ರದ ತೆರಿಗೆ ಹಂಚಿಕೆಯ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ ಕರ್ನಾಟಕ ಜಿಎಸ್​​ಟಿ ಸಂಗ್ರಹದಲ್ಲಿ ಅಗ್ರಗಣ್ಯವಾಗಿದ್ದರೂ, ಕಡಿಮೆ ತೆರಿಗೆ ಹಂಚಿಕೆ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂಬುದು ಕಾಂಗ್ರೆಸ್ ಸರ್ಕಾರದ ಆರೋಪ.‌ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ತೆರಿಗೆ ಪಾಲನ್ನು ಬಿಡುಗಡೆ ಮಾಡಲಾಗಿದೆ. ಜಿಎಸ್​​ಟಿ ಸೇರಿದಂತೆ ಅತಿಹೆಚ್ಚು ತೆರಿಗೆ ಸಂಗ್ರಹ ಮಾಡಲಾಗುತ್ತಿದ್ದರೂ, ಕರ್ನಾಟಕಕ್ಕೆ ಅತ್ಯಲ್ಪ ತೆರಿಗೆ ಹಂಚಿಕೆ ನೀಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ತೀವ್ರ ಆಕ್ರೋಶ ಹೊರಹಾಕಿದೆ.

ರಾಜ್ಯ ಸಂಗ್ರಹಿಸಿದ ಸಮಗ್ರ ಜಿಎಸ್​​ಟಿ ಎಷ್ಟು : ಜೂನ್ ತಿಂಗಳಲ್ಲಿ 2,833 ಕೋಟಿ ರೂ. ಸಿಜಿಎಸ್​​ಟಿ, 3,501 ಕೋಟಿ ರೂ. ಎಸ್​​ಜಿಎಸ್​ಟಿ ಹಾಗೂ 4,514 ಕೋಟಿ ರೂ. ಐಜಿಎಸ್​ಟಿ ಸಂಗ್ರಹಿಸಲಾಗಿದೆ. ಜುಲೈ ತಿಂಗಳಲ್ಲಿ 2,872 ಕೋಟಿ ರೂ. ಸಿಜಿಎಸ್​ಟಿ, 3,557 ಕೋಟಿ ರೂ. ಎಸ್​ಜಿಎಸ್​​ಟಿ ಹಾಗೂ 4,948 ಕೋಟಿ ರೂ. ಐಜಿಎಸ್​ಟಿ ಸಂಗ್ರಹವಾಗಿದೆ. ಆಗಸ್ಟ್ ತಿಂಗಳಲ್ಲಿ 2,798 ಕೋಟಿ ರೂ. ಸಿಜಿಎಸ್​​ಟಿ, 3,417 ಕೋಟಿ ರೂ. ಎಸ್​ಜಿಎಸ್​​ಟಿ ಹಾಗೂ 4,676 ಕೋಟಿ ಐಜಿಎಸ್​​ಟಿ ಸಂಗ್ರಹವಾಗಿದೆ.

ಬಿಡುಗಡೆಯಾಗಿರುವ ಕೇಂದ್ರದ ತೆರಿಗೆ ಹಂಚಿಕೆ ಏನಿದೆ?: ಕರ್ನಾಟಕಕ್ಕೆ 2024-25ನೇ ಸಾಲಿನಲ್ಲಿ 44,485 ಕೋಟಿ ರೂ.ಗಳಷ್ಟು ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆಯಾಗಿದೆ.‌ ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ 37,252 ಕೋಟಿ ರೂ. ತೆರಿಗೆ ಹಂಚಿಕೆ ಮಾಡಲಾಗಿತ್ತು. ಈ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ ಹೆಚ್ಚಿನ ತೆರಿಗೆ ಹಂಚಿಕೆಯಾಗಿದೆ.

ಆರ್ಥಿಕ ಇಲಾಖೆ ನೀಡಿದ ಮಾಹಿತಿಯಂತೆ, ಪ್ರಸಕ್ತ ಸಾಲಿನಲ್ಲಿ ಏಪ್ರಿಲ್ ತಿಂಗಳಲ್ಲಿ 2,548 ಕೋಟಿ ರೂ. ತೆರಿಗೆ ಹಂಚಿಕೆ ಹಣ ಬಿಡುಗಡೆ ಮಾಡಲಾಗಿದೆ. ಮೇ ತಿಂಗಳಲ್ಲೂ 2,548 ಕೋಟಿ ರೂ. ಕೇಂದ್ರದ ತೆರಿಗೆ ಹಂಚಿಕೆ ಹಣವನ್ನು ಬಿಡುಗಡೆ ಮಾಡಲಾಗಿದೆ. ಜೂನ್ ತಿಂಗಳಲ್ಲಿ 5,097 ಕೋಟಿ ರೂ. ತೆರಿಗೆ ಹಂಚಿಕೆ ಹಣ ಬಿಡುಗಡೆಗೊಂಡಿದೆ.

ಜುಲೈ ತಿಂಗಳಲ್ಲಿ ಕೇಂದ್ರದ ತೆರಿಗೆ ಹಂಚಿಕೆ ಮೊತ್ತದಲ್ಲಿ ರಾಜ್ಯಕ್ಕೆ 3,178 ಕೋಟಿ ರೂ. ಹಾಗೂ ಆಗಸ್ಟ್ ತಿಂಗಳಲ್ಲಿ ರಾಜ್ಯಕ್ಕೆ 3,249 ಕೋಟಿ ರೂ. ತೆರಿಗೆ ಹಂಚಿಕೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಬಾಪ್ತು ಕೇಂದ್ರ ಸರ್ಕಾರ ರಾಜ್ಯಕ್ಕೆ ಒಟ್ಟು 6,498 ಕೋಟಿ ರೂ. ತೆರಿಗೆ ಹಂಚಿಕೆ ಹಣವನ್ನು ಬಿಡುಗಡೆ ಮಾಡಿದೆ. ಕಳೆದ ಗುರುವಾರ ಕೇಂದ್ರ ಸರ್ಕಾರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ತೆರಿಗೆ ಹಂಚಿಕೆ ಹಣವನ್ನು ಬಿಡುಗಡೆ ಮಾಡಿತ್ತು.

Leave a Reply

Your email address will not be published. Required fields are marked *