ಹುಬ್ಬಳ್ಳಿ: ಬೆಂಗಳೂರು ಹೊರತು ಪಡಿಸಿದರೆ ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪಡೆದುಕೊಂಡಿದೆ. ಆದರೆ ಅವಳಿ ನಗರದಲ್ಲಿ ಅಭಿವೃದ್ದಿ ಮಾತ್ರ ಕುಂಠಿತವಾಗಿದೆ. ಪಾಲಿಕೆ ಇದೀಗ ಅನುದಾನ ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸಿಬ್ಬಂದಿ ವೇತನ ನೀಡಲು ಕೂಡ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅವಳಿ ನಗರದ ರಸ್ತೆಗಳು ಗುಂಡಿಮಯವಾಗಿವೆ. ಅಭಿವೃದ್ದಿ ಬಗ್ಗೆ ಕೇಳಿದರೆ ಪಾಲಿಕೆ ಬೊಟ್ಟು ಮಾಡುತ್ತಿರುವುದು ರಾಜ್ಯ ಸರ್ಕಾರದತ್ತ.
ರಾಜ್ಯ ಸರ್ಕಾರದತ್ತ ಪಾಲಿಕೆ ಬೊಟ್ಟು
ರಾಜ್ಯದ ವಾಣಿಜ್ಯ ನಗರಿ, ಶಿಕ್ಷಣ ನಗರಿ ಅಂತ ಕರೆಸಿಕೊಳ್ಳುವ ಹುಬ್ಬಳ್ಳಿ-ಧಾರವಾಡದ ಸ್ಥಿತಿ ಇದೀಗ ದೇವರಿಗೆ ಪ್ರೀತಿ ಅನ್ನುವಂತಾಗಿದೆ. ಎಲ್ಲೆಂದರಲ್ಲಿ ಬಿದ್ದಿರುವ ಗುಂಡಿಗಳು, ಹಾಳಾಗಿ ಹೋಗಿರುವ ರಸ್ತೆಗಳಿಂದ ಅವಳಿ ನಗರದ ಸೌಂದರ್ಯ ಹದಗೆಟ್ಟು ಹೋಗಿದೆ. ಅವಳಿ ನಗರದಲ್ಲಿ ಸಂಚರಿಸಲು ವಾಹನ ಸವಾರರು, ಜನರು ನಿತ್ಯ ಹತ್ತಾರು ರೀತಿ ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿ ಮಾಡಿಸಿ ಅಂತ ಜನರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಕೇಳಿದರೆ, ಪಾಲಿಕೆ ಬೊಟ್ಟು ಮಾಡುತ್ತಿರುವುದು ರಾಜ್ಯ ಸರ್ಕಾರದತ್ತ.
ಪಾಲಿಕೆಯಲ್ಲಿ ಸದ್ಯ ಯಾವುದೇ ಅನುದಾನ ಇಲ್ಲಾ ಅಂತ ಪಾಲಿಕೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ತಗ್ಗು ಗುಂಡಿಗಳನ್ನು ಮುಚ್ಚಲು ಕೂಡ ಆಗದಂತಹ ದಯನೀಯ ಸ್ಥಿತಿಗೆ ಪಾಲಿಕೆ ತಲುಪಿದೆ. ಅಭಿವೃದ್ದಿ ಕೆಲಸಗಳಿಗೆ ಹಣ ನೀಡುವುದು ದೂರದ ಮಾತಾಗಿದ್ದು, ಕನಿಷ್ಟ ಸಿಬ್ಬಂದಿಗಳಿಗೆ ಸರಿಯಾಗಿ ಸಂಬಳ ನೀಡಲು ಕೂಡ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
For More Updates Join our WhatsApp Group :
