ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದ ಫ್ಲೈಓವರ್ ಕಾಮಗಾರಿ ಭರದಿಂದ ಸಾಗಿದೆ. ಈಗಾಗಲೇ ಶೇ.80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈಗ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಗೆ ರಾಣಿ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನ ಆವರಣದ ಕಾಂಪೌಂಡ್ ಭಾಗಶಃ ತೆರವಾಗಲಿದೆ.
ಈದ್ಗಾ ಮೈದಾನದ ಕಾಂಪೌಂಡ್ ತೆರವು ಕಾರ್ಯಕ್ಕೆ ಅನುಮತಿ ಹಾಗೂ ಭದ್ರತೆ ಕೋರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಹೆಚ್‌ಎಐ) ಅಧಿಕಾರಿಗಳು ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆಗೆ ಜುಲೈ 23ರಂದು ಪತ್ರ ಬರೆದಿದ್ದಾರೆ.
ಚನ್ನಮ್ಮ ವೃತ್ತದಿಂದ ಕೋರ್ಟ್ ವೃತ್ತದ ಕಡೆ ಮತ್ತು ಚನ್ನಮ್ಮ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ತೆರಳುವ ಈದ್ಗಾ ಮೈದಾನದ ಅಕ್ಕಪಕ್ಕ ಅಂದಾಜು ಶೇ 10-15ರಷ್ಟು ಭಾಗ ತೆರವು ಆಗಲಿದೆ. ಮೇಲ್ಸೇತುವೆಗೆ ಕಾಮತ್ ಹೋಟೆಲ್ ಎದುರು ಬೃಹತ್ ಪಿಲ್ಲರ್, ಸಂಗೊಳ್ಳಿ ರಾಯಣ್ಣ ವೃತ್ತದ ಹೈಮಾಸ್ಟ್ ಕಂಬದ ಬಳಿ ಒಂದು ಪಿಲ್ಲರ್ ನಿರ್ಮಾಣ ಆಗಲಿದೆ. ಈ ಕಾಮಗಾರಿಗೆ ಪಕ್ಕದ ಉಪನಗರ ಪೊಲೀಸ್ ಠಾಣೆ ಕಟ್ಟಡದ ಶೇ.20ರಷ್ಟು ಭಾಗವೂ ತೆರವು ಆಗಲಿದೆ.
ಮೊದಲ ಹಂತದ 300 ಕೋಟಿ ರೂ ವೆಚ್ಚದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಎನ್‌ಹೆಚ್‌ಎಐ ಅಧಿಕಾರಿಗಳು ಮುಂದಾಗಿದ್ದಾರೆ. ಚನ್ನಮ್ಮ ವೃತ್ತವನ್ನು ಕೇಂದ್ರವಾಗಿರಿಸಿಕೊಂಡು ಮೊದಲ ಹಂತದಲ್ಲಿ 300 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಈದ್ಗಾ ಮೈದಾನದ ಕಾಂಪೌಂಡ್ ತೆರವಿಗೆ ಭದ್ರತೆ ನೀಡುವ ಕುರಿತಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಂಜಿನಿಯರ್ ಗಂಗಾಧರ್ ತಿಳಿಸಿದ್ದಾರೆ.