ತನ್ನ ಸಹೋದರನಿಗೆ ಕಿಡ್ನಿ ನೀಡಿದ ಪತ್ನಿಯಿಂದ ₹40 ಲಕ್ಷ ಕೇಳಿದ ಪತಿ

ಗೊಂಡಾ(ಉತ್ತರಪ್ರದೇಶ): ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಕ್ಕೆ ಪ್ರತಿಯಾಗಿ ಹಣ ಪಡೆಯದ್ದಕ್ಕೆ ಮಹಿಳೆಗೆ ಪತಿ ವಾಟ್ಸ್ಆಯಪ್ ಮೂಲಕ ವಿಚ್ಛೇದನ ನೀಡಿರುವ ಘಟನೆ ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ.

ಸಂತ್ರಸ್ತೆ ಧನೇಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಜೈತಾಪುರ ನಿವಾಸಿ ತರುನ್ನುಮ್ ಇದೇ ಗ್ರಾಮದ ನಿವಾಸಿಯಾಗಿರುವ ರಶೀದ್ ಎಂಬವರನ್ನು ಕಳೆದ 20 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ರಶೀದ್ ಮತ್ತೊಂದು ಮದುವೆಯಾಗಿದ್ದನು ಎಂದು ತರುನ್ನುಮ್ ಹೇಳಿದ್ದಾರೆ.

ರಶೀದ್ ಸೌದಿ ಅರೇಬಿಯಾದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಈ ನಡುವೆ ತರುನ್ನುಮ್ ಸಹೋದರ ಶಾಕೀರ್ಗೆ ತೀವ್ರ ಅನಾರೋಗ್ಯ ಉಂಟಾಗಿತ್ತು. ವೈದ್ಯರು ಪರೀಕ್ಷಿಸಿದಾಗ ಕಿಡ್ನಿ ವೈಫಲ್ಯ ಕಂಡುಬಂದಿದೆ. ಕೂಡಲೇ ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ ಇದೆ ಎಂದು ವೈದ್ಯರು ಹೇಳಿದ್ದರು. ಸಹೋದರನ ಪ್ರಾಣ ಉಳಿಸಲು ತರುನ್ನುಮ್ ಕಿಡ್ನಿ ದಾನ ಮಾಡಲು ಒಪ್ಪಿಕೊಂಡರು. ಇದಕ್ಕೆ ಪತಿ ರಶೀದ್ ಕೂಡ ಒಪ್ಪಿಗೆ ಸೂಚಿಸಿದ್ದನು. ಬಳಿಕ ಶಾಕೀರ್ಗೆ ಮುಂಬೈನ ಆಸ್ಪತ್ರೆಯೊಂದರಲ್ಲಿ ಕಿಡ್ನಿ ಜೋಡಣೆ ಮಾಡಲಾಗಿದೆ.

ಶಾಕೀರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ತರುನ್ನುಮ್ ನೇರವಾಗಿ ತನ್ನ ಅತ್ತೆ ಮನೆಗೆ ಬಂದಿದ್ದಾರೆ. ಈ ವಿಷಯವನ್ನು ಪತಿಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ರಶೀದ್, ಸಹೋದರನಿಂದ 40 ಲಕ್ಷ ರೂ ಪಡೆಯುವಂತೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೊಪ್ಪದ ತರುನ್ನುಮ್ಗೆ ವಾಟ್ಸ್ಆಯಪ್ ಮೂಲಕ ತ್ರಿವಳಿ ತಲಾಖ್ ನೀಡಿದ್ದಾನೆ. ಇದೀಗ ನ್ಯಾಯ ಕೊಡಿಸುವಂತೆ ತರುನ್ನುಮ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ತರುನ್ನುಮ್, ನನ್ನ ಸಹೋದರನಿಗೆ ಕಿಡ್ನಿ ವೈಫಲ್ಯ ಉಂಟಾಗಿತ್ತು. ಕಳೆದ ಐದು ತಿಂಗಳ ಹಿಂದೆ ಸಹೋದರನಿಗೆ ನನ್ನ ಕಿಡ್ನಿಯನ್ನು ಅಳವಡಿಸಲಾಯಿತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ನಾನು ನನ್ನ ಅತ್ತೆ ಮನೆಗೆ ಬಂದೆ. ಈ ವೇಳೆ ಪತಿ ಕಿಡ್ನಿ ನೀಡಿರುವುದಕ್ಕೆ ಪ್ರತಿಯಾಗಿ 40 ಲಕ್ಷ ರೂ ಪಡೆಯುವಂತೆ ಹೇಳಿದ್ದಾನೆ. ಇದಕ್ಕೆ ನಿರಾಕರಿಸಿದಾಗ ಆಗಸ್ಟ್ 30ರಂದು ವಾಟ್ಸ್ಆಯಪ್ ಮೂಲಕ ತ್ರಿವಳಿ ತಲಾಖ್ ನೀಡಿದ್ದಾನೆ ಎಂದರು.

ವಿಚ್ಛೇದನ ನೀಡಿದ ಬಳಿಕವೂ ತರುನ್ನುಮ್ ತನ್ನ ಗಂಡನ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಇದೀಗ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದು, ನ್ಯಾಯ ಕೊಡಿಸುವಂತೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, ವಾಟ್ಸ್ಆಯಪ್ ಮೂಲಕ ಪತಿ ವಿಚ್ಛೇದನ ನೀಡಿರುವುದಾಗಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಕೆಲವು ತಿಂಗಳ ಹಿಂದೆ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಸುತ್ತೇವೆ ಎಂದು ಹೇಳಿದರು.

Pragati TV Social Connect for more latest u

Leave a Reply

Your email address will not be published. Required fields are marked *