ಬೆಂಗಳೂರು: “ಚನ್ನಪಟ್ಟಣದಲ್ಲಿ ನಾನೇ ಕ್ಯಾಂಡಿಡೇಟ್, ಬಿ ಫಾರಂ ಬರೆಯೋನು ನಾನು, ಕ್ಯಾಂಡಿಡೇಟ್ ಹಾಕುವವನು ನಾನು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಯಾರು ಕಾಂಗ್ರೆಸ್ ಅಭ್ಯರ್ಥಿ ಎಂಬ ವಿಚಾರಕ್ಕೆ ” ನಾನೇ ರೀ ಕ್ಯಾಂಡಿಡೇಟ್, ಫಾರಂ ಬರೆಯೋನು ನಾನು, ಕ್ಯಾಂಡಿಡೇಟ್ ಹಾಕುವವನು ನಾನು, ಅವರು ವೋಟ್ ಹಾಕುವುದು ನನಗೆ. ನಿಮ್ಮನ್ನು ನಿಲ್ಲಿಸಿದರೂ ನನಗೇ ವೋಟ್ ಹಾಕುವುದು ಎಂದು ಗೆಲುವಿನ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಸಿ.ಪಿ. ಯೋಗೇಶ್ವರ್ಗೆ ಟಿಕೆಟ್ ಕೊಡುತ್ತೀರಾ ಎಂಬ ಪ್ರಶ್ನೆಗೆ “ಈಗ ಯಾಕೆ ರೀ ಅದರ ಬಗ್ಗೆ ಮಾತು. ಅವರು ಮೈತ್ರಿಯಲ್ಲಿದ್ದಾರೆ. ನಾನು ಈಗ ಯಾಕೆ ಮಾತನಾಡಲಿ. ನಿಮ್ಮ ಮಾತಿನಲ್ಲಿ ನನಗೆ ನಂಬಿಕೆ ಇಲ್ಲ” ಎಂದರು.
ಬಳಿಕ ಚನ್ನಪಟ್ಟಣ ಉದ್ಯೋಗಮೇಳ ವಿಚಾರಕ್ಕೆ ಡಿಕೆಶಿ, “ಜನ ಅಧಿಕಾರ ಮಾಡಿ ಅಂತ ಅವಕಾಶ ಕೊಟ್ಟಿದ್ದಾರೆ. ಅಧಿಕಾರ ಉಪಯೋಗಿಸಿ ಜನರಿಗೆ ಒಳ್ಳೆಯದು ಮಾಡಬೇಕು. ನಿನ್ನೆ ಎತ್ತಿನ ಹೊಳೆಗೆ ಹೋಗಿದ್ದೆ, ನೀರನ್ನು ಚಾಲನೆ ಮಾಡಿ ಬಂದಿದ್ದೇನೆ. ಅಧಿಕೃತ ಉದ್ಘಾಟನೆಗೆ ಒಳ್ಳೆಯ ಮುಹೂರ್ತ ನೋಡುತ್ತೇವೆ. ಸಿಎಂ ಜೊತೆಗೂ ಮಾತುಕತೆ ನಡೆಸಿದ್ದೇನೆ. ಈಗ ಉದ್ಯೋಗ ಮೇಳ ಮಾಡುತ್ತಿದ್ದೇವೆ. ಚನ್ನಪಟ್ಟಣಕ್ಕೆ ಹೋದಾಗೆಲೆಲ್ಲ ಹುಡುಗರು ಉದ್ಯೋಗ ಮೇಳದ ಬಗ್ಗೆ ಕೇಳುತ್ತಾ ಇರುತ್ತಾರೆ. ಹಾಗಾಗಿ ಉದ್ಯೋಗ ಮೇಳ ಮಾಡುತ್ತೇವೆ” ಎಂದು ತಿಳಿಸಿದರು.
ಬಿಎಸ್ ಯಡಿಯೂರಪ್ಪ ಅವರ ಪೋಕ್ಸೋ ಕೇಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ ಶಿವಕುಮಾರ್, “ಕೋರ್ಟ್ ವಿಚಾರವೆಲ್ಲಾ ನನಗೆ ಗೊತ್ತಿಲ್ಲ. ಕೋರ್ಟ್ ತೀರ್ಪು ನೀಡುವುದು ಅಷ್ಟೇ ಗೊತ್ತು. ತೀರ್ಪು ಬಂದ ಮೇಲಷ್ಟೇ ನಾವು ಮಾತನಾಡೋಣ” ಎಂದು ಹೇಳಿದರು.