10 ಜಿಲ್ಲೆಗಳಲ್ಲಿನ ಅಕ್ರಮ ರೆಸಾರ್ಟ್‌, ಹೋಂಸ್ಟೇಗಳು ಶೀಘ್ರದಲ್ಲೇ ತೆರವು

ಚಿಕ್ಕಮಗಳೂರು: ಉತ್ತರ ಕನ್ನಡದ ಶಿರೂರು ಮತ್ತು ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ 10 ಜಿಲ್ಲೆಗಳಲ್ಲಿ ಅತಿಕ್ರಮಣ ಅರಣ್ಯ ಭೂಮಿಯಲ್ಲಿ ತಲೆ ಎತ್ತಿರುವ ಹೋಂಸ್ಟೇ ಹಾಗೂ ರೆಸಾರ್ಟ್‌ಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

2015ರಿಂದ ಅರಣ್ಯ ಪ್ರದೇಶದಲ್ಲಿ ತಲೆ ಎತ್ತಿರುವ ಅಕ್ರಮ ಹೋಂಸ್ಟೇ, ರೆಸಾರ್ಟ್, ತೋಟಗಳನ್ನು ತೆರವುಗೊಳಿಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಇತ್ತೀಚೆಗೆ ಇಲಾಖೆಗೆ ಸೂಚಿಸಿದ್ದರು.

ಪ್ರವಾಸೋದ್ಯಮ ಇಲಾಖೆಯ ಮಾಹಿತಿಯ ಪ್ರಕಾರ, ಚಿಕ್ಕಮಗಳೂರು ಜಿಲ್ಲೆಯ ಚದ್ರದ್ರೋಣ ಬೆಟ್ಟದ ಶ್ರೇಣಿ ಮತ್ತು ಮಲೆನಾಡು ಪ್ರದೇಶದ ಇತರ ಭಾಗಗಳಲ್ಲಿ 2,000 ಕ್ಕೂ ಹೆಚ್ಚು ಹೋಂಸ್ಟೇಗಳು ಮತ್ತು ರೆಸಾರ್ಟ್‌ಗಳು ತಲೆ ಎತ್ತಿದ್ದು, ಕೆಲವರು ನೋಂದಣಿ ಮಾಡಿಕೊಂಡಿದ್ದರೆ, ಕೆಲವರು ಅಕ್ರಮವಾಗಿ ನಿರ್ಮಾಣ ಮಾಡಿರುವುದು ಕಂಡು ಬಂದಿದೆ. ಜಿಲ್ಲಾಡಳಿತ ಎಚ್ಚರಿಕೆ ನೀಡಿದರೂ ಈ ಹೋಂಸ್ಟೇಗಳು ಅಕ್ರಮವಾಗಿ ಮುನ್ನಡೆಯುತ್ತಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸೂಚನೆ ನೀಡಿದೆ.

ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಎಸ್.ಗಿರಿಜಾಶಂಕರ್, ಗುಡ್ಡಗಾಡುಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿ, ಅರಣ್ಯಗಳಲ್ಲಿನ ನೈಸರ್ಗಿಕ ಸಂಪನ್ಮೂಲಗಳ ನೀರನ್ನು ಬಳಸುತ್ತಿರುವ ಹೋಂಸ್ಟೇ ಮತ್ತು ರೆಸಾರ್ಟ್ ಮಾಲೀಕರು ಭೂಕುಸಿತ ಮತ್ತು ಕಾಡುಗಳಲ್ಲಿನ ಜಲಮೂಲಗಳ ಮಾಲಿನ್ಯಕ್ಕೆ ಕಾರಣರಾಗಿದ್ದಾರೆಂದು ಹೇಳಿದ್ದಾರೆ.

Leave a Reply

Your email address will not be published. Required fields are marked *