ಸಿನೆಮಾ ಮಾದರಿ ದಾಳಿ ನಡೆಸಿದ ಮಂಗಳೂರಿನ ಕದ್ರಿ ಪೊಲೀಸರು
ಮಂಗಳೂರು: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 34 ಜಾನುವಾರುಗಳನ್ನು ಮಂಗಳೂರಿನ ಕದ್ರಿ ಠಾಣೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ಜಾನುವಾರು ಸಾಗಾಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರ್ಯಾಚರಣೆ ನಡೆಸಿರುವ ಖಾಕಿ ತಂಡ ಜಾಲವನ್ನು ಭೇದಿಸಿದೆ. ಜಾನುವಾರುಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಈ ವೇಳೆ ಕಂಡುಬಂದಿದ್ದು, ಕೇರಳದ ಕಸಾಯಿಖಾನೆಗೆ ಇವುಗಳನ್ನು ಸಾಗಿಸಲಾಗುತ್ತಿತ್ತು. ಪ್ರಕರಣ ಸಂಬಂಧ ದಸ್ತಗೀರ್ ಸಾಬ್, ಖತಿಪ್ ಪಾಷಾ ಮತ್ತು ಅಯೂಬ್ ಖಾನ್ ಎಂಬವರನ್ನು ಬಂಧಿಸಲಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಿಂದ ಆರೋಪಿಗಳು ಜಾನುವಾರು ತಂದಿದ್ದರು ಎನ್ನಲಾಗಿದ್ದು, ಬಂಧಿತರ ವಿಚಾರಣೆ ತೀವ್ರಗೊಂಡಿದೆ. ಶಿರಾಳಕೊಪ್ಪದ ಒಂದೇ ಕಡೆಯಿಂದ ಜಾನುವಾರು ತಂದಿರುವುದಾಗಿ ಆರೋಪಿಗಳು ಹೇಳುತ್ತಿದ್ದರೂ, ಬೇರೆ ಬೇರೆ ಕಡೆ ರೈತರಿಂದ ಜಾನುವಾರು ಖರೀದಿಸಿ ಸಾಗಾಟ ಮಾಡುತ್ತಿದ್ದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಬಂಧಿತ ಮೂವರೂ ಸಹ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮೂಲದವರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಕರಾವಳಿ ಭಾಗದಲ್ಲಿ ನಿರಂತರವಾಗಿ ಅಕ್ರಮ ಗೋ ಸಾಗಾಟ ಆಗ್ತಿದೆ. ಬಿಜೆಪಿ ಸರ್ಕಾರ ಇದ್ದಾಗ ಅಕ್ರಮ ಗೋ ಸಾಗಾಟ ತಡೆಗೆ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅಕ್ರಮ ಗೋ ಸಾಗಾಟಗಾರರಿಗೆ ಸಹಕಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ನಮ್ಮ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ಗೋವನ್ನು ರಕ್ಷಿಸಿದ್ದಾರೆ. ದಿನನಿತ್ಯ ಪೊಲೀಸ್ ಇಲಾಖೆ ಈ ರೀತಿ ಅಕ್ರಮ ಗೋ ಸಾಗಾಟ ತಡೆಯುವ ಧೈರ್ಯ ಮಾಡಬೇಕು. ಡ್ರಗ್ಸ್ ಮುಕ್ತ ಮಂಗಳೂರು ಮಾಡಿದ ಹಾಗೆ ಅಕ್ರಮ ಗೋ ಸಾಗಾಟ ತಡೆಗೆ ಕ್ರಮ ಕೈಗೊಳ್ಳಬೇಕು. ತಲವಾರು ಹಿಡಿದುಕೊಂಡು ಮನೆ ಮನೆಗೆ ಬಂದು ಗೋ ಕಳ್ಳತನ ಮಾಡ್ತಿದ್ದಾರೆ. ಇಂತವರನ್ನು ಬೇರು ಸಹಿತ ಕಿತ್ತೆಸೆಯಬೇಕು ಎಂದು ಆಗ್ರಹಿಸಿದ್ದಾರೆ.
For More Updates Join our WhatsApp Group :




