ಅಶ್ವಿನಿ ವೈಷ್ಣವ್ ಅಧ್ಯಕ್ಷತೆಯಲ್ಲಿ ಚರ್ಚೆ.
ನವದೆಹಲಿ : ರೈಲ್ವೆ ಭವನದಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರ ಅಧ್ಯಕ್ಷತೆಯಲ್ಲಿ ರೈಲ್ವೆ ಮಂಡಳಿಯ ಅಧ್ಯಕ್ಷರು, ಸಿಇಒ ಹಾಗೂ ಹಿರಿಯ ಅಧಿಕಾರಿಗಳ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಭಾರತೀಯ ರೈಲ್ವೆಯ ಮುಂದಿನ ದಿಕ್ಕು ಮತ್ತು ಪ್ರಮುಖ ಸುಧಾರಣಾ ಕ್ರಮಗಳ ಬಗ್ಗೆ ಸಮಗ್ರ ಚರ್ಚೆ ನಡೆಸಲಾಯಿತು ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.
ಸಭೆಯಲ್ಲಿ ಈ ವರ್ಷ 52 ಪ್ರಮುಖ ಸುಧಾರಣೆಗಳನ್ನು ಜಾರಿಗೆ ತರಲು ಗುರಿ ನಿಗದಿಪಡಿಸಲಾಗಿದ್ದು, ಮುಂದಿನ 52 ವಾರಗಳಲ್ಲಿ ದಕ್ಷತೆ, ಆಡಳಿತ ವ್ಯವಸ್ಥೆ ಮತ್ತು ಸೇವಾ ವಿತರಣೆಯಲ್ಲಿ ವ್ಯವಸ್ಥಿತ ಬದಲಾವಣೆಗಳನ್ನು ತರಲು ನಿರ್ಧರಿಸಲಾಗಿದೆ. ರೈಲ್ವೆ ಕಾರ್ಯಾಚರಣೆಯಲ್ಲಿ ಆಧುನಿಕತೆಯನ್ನು ತರುವ ನಿಟ್ಟಿನಲ್ಲಿ AI ಹಾಗೂ ಹೊಸ ತಂತ್ರಜ್ಞಾನಗಳ ಬಳಕೆ, ಸಿಬ್ಬಂದಿ ತರಬೇತಿಯಲ್ಲಿ ಸುಧಾರಣೆ ಮತ್ತು ರೈಲುಗಳಲ್ಲಿ ನೀಡಲಾಗುವ ಆಹಾರದ ಗುಣಮಟ್ಟ ಹೆಚ್ಚಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಸುರಕ್ಷತೆ ವಿಷಯಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಸತತ ರೈಲು ಅಪಘಾತಗಳಲ್ಲಿ ಈಗಾಗಲೇ ಸುಮಾರು 90 ಶೇಕಡಾ ಕಡಿತ ಸಾಧಿಸಲಾಗಿದೆ. 2014–15ರಲ್ಲಿ 135 ಅಪಘಾತಗಳಿದ್ದರೆ, 2025–26ರಲ್ಲಿ ಅವು 11ಕ್ಕೆ ಇಳಿದಿವೆ. ಮುಂದಿನ ದಿನಗಳಲ್ಲಿ ಇದನ್ನು ಒಂದಂಕಿಗೆ ತರುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಇದೇ ವೇಳೆ, ರೈಲ್ವೆಯ ಮೂಲಸೌಕರ್ಯ ಅಭಿವೃದ್ಧಿ, ನಿರ್ವಹಣೆ ಮತ್ತು ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದ ವಿವಿಧ ಉಪಕ್ರಮಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. ಪ್ರಯಾಣಿಕರ ಸುರಕ್ಷತೆ, ತಾಂತ್ರಿಕ ಪ್ರಗತಿ ಮತ್ತು ಪ್ರಯಾಣಿಕರ ಕೇಂದ್ರಿತ ಅಭಿವೃದ್ಧಿಗೆ ರೈಲ್ವೆ ಸಚಿವಾಲಯ ತನ್ನ ಬದ್ಧತೆಯನ್ನು ಪುನರುಚ್ಚರಿಸಿರುವುದಾಗಿ ತಿಳಿಸಿದರು.
For More Updates Join our WhatsApp Group :




