ನಿಮ್ಮ ಆಸ್ತಿಗಳ ಮೌಲ್ಯ ಹೆಚ್ಚು ಮಾಡುತ್ತೇನೆ, ಮಾರಬೇಡಿ – ಡಿಸಿಎಂ ಡಿಕೆಶಿ ಮನವಿ

ಅರ್ಕಾವತಿ ಜಲಾಶಯ ಬಲದಂಡೆ ನಾಲೆಯ ಏತ ನೀರಾವರಿ ಪುನಶ್ಚೇತನ ಕಾಮಗಾರಿಯ ಪರೀಕ್ಷಾರ್ಥದಲ್ಲಿ ಡಿಸಿಎಂ

ಅರ್ಕಾವತಿ ಜಲಾಶಯ ಬಲದಂಡೆ ನಾಲೆಯ ಏತ ನೀರಾವರಿ ಪುನಶ್ಚೇತನ ಕಾಮಗಾರಿಯ ಪರೀಕ್ಷಾರ್ಥದಲ್ಲಿ ಡಿಸಿಎಂ

ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ಅರ್ಕಾವತಿ ಜಲಾಶಯ ಬಲದಂಡೆ ನಾಲೆಯ ಏತ ನೀರಾವರಿ ಪುನಶ್ಚೇತನ ಕಾಮಗಾರಿಯ ಪರೀಕ್ಷಾರ್ಥ ಸಮಾರಂಭಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಶನಿವಾರ ಚಾಲನೆ ಕೊಟ್ಟರು.

ಈ ವೇಳೆ ಮಾತನಾಡಿದ ಅವರು, ಮಲೆನಾಡು ಸೇರಿದಂತೆ ಇತರೆ ಕಡೆ ಉತ್ತಮ ಮಳೆಯಾಗುತ್ತಿದೆ. ಮಂಡ್ಯ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಉತ್ತಮ ಮಳೆಯಾಗಿಲ್ಲ. ಆದ ಕಾರಣಕ್ಕೆ ಅರ್ಕಾವತಿ ಬಲದಂಡೆ ನಾಲೆ ಏತ ನೀರಾವರಿ ಯೋಜನೆಯನ್ನು ತುರ್ತಾಗಿ ಪುನಶ್ಚೇತನ ಮಾಡಿ ಚಾಲನೆ ನೀಡಿದ್ದೇವೆ. ಇದು ನನ್ನ ಬಹುದಿನದ ಕನಸು. ಇದರಿಂದ ಸಾವಿರ ಎಕರೆಗೂ ಹೆಚ್ಚು ಭೂಮಿಗೆ ನೀರಾವರಿ ಅನುಕೂಲವಾಗಲಿದೆ. ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಸಚಿವನಾಗಿದ್ದಾಗ ಒತ್ತಾಯ ಮಾಡಿ ಅವರನ್ನು ಕರೆದುಕೊಂಡು ಬಂದು ಅರ್ಕಾವತಿ ಬಲದಂಡೆ ನಾಲೆಯ ಏತ ನೀರಾವರಿ ಕಾಮಗಾರಿಯನ್ನು ಉದ್ಘಾಟಿಸಲಾಗಿತ್ತು ಎಂದು ತಿಳಿಸಿದರು.

ರೈತರು ಕಡಿಮೆ ಹಣಕ್ಕೆ ಭೂಮಿ ಕಳೆದುಕೊಂಡಿದ್ದಾರೆ-ಡಿಸಿಎಂ: ಈ ಭಾಗದ ರೈತರು ಈ ಯೋಜನೆ ಸಾಕಾರಗೊಳ್ಳುವ ವೇಳೆಯಲ್ಲಿ ಕೇವಲ ಮೂರು- ನಾಲ್ಕು ಸಾವಿರಕ್ಕೆ ತಮ್ಮ ಜಮೀನುಗಳನ್ನು ಕಳೆದುಕೊಂಡಿದ್ದಾರೆ. ಈ ವಿಚಾರ ನನಗೆ ಈಗಲೂ ಬೇಸರ ತರಿಸುತ್ತದೆ. ಹಣಕ್ಕೆ ಕಷ್ಟವಿದ್ದ ಕಾಲದಲ್ಲೂ ಎಸ್. ಎಂ. ಕೃಷ್ಣ ಅವರ ಕೈಯಿಂದ ಸುಮಾರು 300 ಜನ ರೈತರಿಗೆ ಎಕರೆಗೆ ಇಂತಿಷ್ಟು ಎಂದು ಹೆಚ್ಚುವರಿಯಾಗಿ ಏಳು ಕೋಟಿ ಪರಿಹಾರ ಕೊಡಿಸಲಾಯಿತು.

ದೇವರ ಅನುಗ್ರಹದಿಂದ ನಾನೇ ಇಂದು ನೀರಾವರಿ ಸಚಿವನಾಗಿದ್ದೇನೆ. ಇಂತಹ ನೂರು ಯೋಜನೆಗಳನ್ನು ಮಾಡುವ ಶಕ್ತಿಯನ್ನು ದೇವರು ನೀಡಿದ್ದಾನೆ. ಶಿಂಷಾ ನೀರನ್ನು ಸಾತನೂರು ಹಾಗೂ ಕೆಂಪಮ್ಮನ ದೊಡ್ಡಿವರೆಗೂ ತೆಗೆದುಕೊಂಡು ಹೋಗಲಾಗುತ್ತಿದೆ. ದೊಡ್ಡ ಆಲಹಳ್ಳಿ ಕೆರೆಗೂ ನೀರನ್ನು ತುಂಬಿಸಲಾಗುತ್ತಿದೆ. ಕೈಲಾಂಚ, ಮಾಗಡಿ, ಮಾತೂರು ಕೆರೆ, ಚನ್ನಪಟ್ಟಣ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಲಾಯಿತು. ಆದರೂ ನಮ್ಮ ಜನಕ್ಕೆ ಕೆಲಸದ ಮಹತ್ವ ಗೊತ್ತಾಗಲಿಲ್ಲ ಎಂದು ಡಿಕೆಶಿ ಬೇಸರ ವ್ಯಕ್ತಪಡಿಸಿದರು.

ಡಿ.ಕೆ.ಶಿ. ಕ್ಷೇತ್ರ ಎಂದ ತಕ್ಷಣ ಅಮಿತ್ ಶಾ, ಅಧಿಕಾರಿಗಳು ಬರುವುದನ್ನೇ ಬಿಟ್ಟರು: ಸಾತನೂರು, ಕನಕಪುರ ಭಾಗದಲ್ಲಿ ನನ್ನನ್ನು ಜನಪ್ರತಿನಿಧಿಯಾಗಿ ಆಯ್ಕೆ ಮಾಡಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದೀರ. ಅಮುಲ್ ಸಂಸ್ಥೆಗಿಂತ ಉತ್ತಮವಾದ ಉಪಕರಣಗಳನ್ನು ಶಿವನಹಳ್ಳಿಯ ಬಳಿಯ ಡೈರಿಯಲ್ಲಿ ಸ್ಥಾಪಿಸಿದ್ದೇನೆ. ಅಮಿತ್ ಶಾ ಅವರ ಕಚೇರಿ ಅಧಿಕಾರಿಗಳು ಬಂದು ವೀಕ್ಷಣೆ ಮಾಡಿಕೊಂಡು ಹೋಗಿದ್ದರು. ಡಿ.ಕೆ. ಶಿವಕುಮಾರ್ ಕ್ಷೇತ್ರ ಎಂದು ತಿಳಿದ ತಕ್ಷಣ ಬರುವುದನ್ನೇ ಬಿಟ್ಟರು ಎಂದು ಡಿಸಿಎಂ ತಮ್ಮ ಅಭಿವೃದ್ಧಿಯ ಬಗ್ಗೆ ಸಮರ್ಥಿಸಿಕೊಂಡರು.

ಮುಂದುವರೆದು, ರಸ್ತೆ, ನೀರಾವರಿ, ಶಾಲೆ, ಆಸ್ಪತ್ರೆ, ವಿದ್ಯುತ್ ಹೇಳಿದಂತೆ ಎಲ್ಲಾ ಕೆಲಸಗಳನ್ನು ನನ್ನ ಕ್ಷೇತ್ರಕ್ಕೆ ಮಾಡಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಕೊಟ್ಟು ಗೆಲ್ಲಿಸಿದ್ದೀರಿ. ಲೋಕಸಭೆ ಚುನಾವಣೆಯಲ್ಲಿ ಒಂದಷ್ಟು ವ್ಯತ್ಯಾಸವಾಯಿತು. ಏಕೆ ಎಂದು ಅರ್ಥವಾಗುತ್ತಿಲ್ಲ. ಇದರ ಬಗ್ಗೆ ಪರಿಶೀಲನೆ ಮಾಡಬೇಕು ಎಂದರು.

ಆಸ್ತಿಗಳನ್ನು ಮಾರಿಕೊಳ್ಳಬೇಡಿ: ಈ ಭಾಗದ ಜನರಿಗೆ ನಾನು ಸಲಹೆ ನೀಡುತ್ತಿದ್ದೇನೆ. ನಿಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚು ಮಾಡುತ್ತೇನೆ. ಯಾರು ಮಾರಿಕೊಳ್ಳಬೇಡಿ. ನನ್ನ ತಲೆಯಲ್ಲಿ ಒಂದಷ್ಟು ಲೆಕ್ಕಾಚಾರಗಳಿವೆ, ನನ್ನ ಆಲೋಚನೆಗಳು ನಿಮಗೆ ಈಗ ಅರ್ಥವಾಗುತ್ತಿರಬಹುದು ಎಂದು ಉಪಮುಖ್ಯಮಂತ್ರಿಗಳು ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *