ಲಿಪುಲೇಖ್ ಪಾಸ್ ಮೂಲಕ ಭಾರತ-ಚೀನಾ ವ್ಯಾಪಾರ ಪುನಾರಂಭ.
ನವದೆಹಲಿ: ಭಾರತ ಮತ್ತು ಚೀನಾ ನಡುವೆ ಹಿಮಾಲಯದ ತಪ್ಪಲಲ್ಲಿ ಇರುವ ಮೂರು ಕಣಿವೆ ಮಾರ್ಗಗಳು ಇದೇ ಜೂನ್ ತಿಂಗಳಲ್ಲಿ ಪುನಾರಂಭಗೊಳ್ಳಲಿವೆ. ಇದರಲ್ಲಿ ಉತ್ತರಾಖಂಡ್ನ ಪಿತ್ತೋರಗಡ್ನ ಲಿಪುಲೇಖ್ ಪಾಸ್ ಅಥವಾ ಲಿಪುಲೇಖ ಕಣಿವೆಯೂ ಒಂದು. ಹಾಗೆಯೇ, ಹಿಮಾಚಲದಲ್ಲಿರುವ ಶಿಪಕಿ ಲಾ ಮತ್ತು ಸಿಕ್ಕಿಂನಲ್ಲಿರುವ ನಾಥು ಲಾ ಪಾಸ್ಗಳೂ ಕೂಡ ಮುಕ್ತಗೊಳ್ಳಲಿವೆ. ಕಳೆದ ವರ್ಷ ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ನಡೆಸಿದ ಉನ್ನತ ಮಟ್ಟದ ಸಭೆಯ ಪ್ರತಿಫಲ ಎನ್ನಲಾಗಿದೆ.
ಆರು ವರ್ಷಗಳ ಬಳಿಕ ಈ ಕಣಿವೆ ಮಾರ್ಗಳು ತೆರೆಯಲ್ಪಡುತ್ತಿವೆ. 2020ರಲ್ಲಿ ಗಾಲ್ವನ್ ಬಳಿ ಭಾರತೀಯ ಸೈನಿಕರ ಮೇಲೆ ಚೀನೀ ಸೈನಿಕರು ಭೀಕರವಾಗಿ ಹಲ್ಲೆ ಎಸಗಿದ ಘಟನೆ ಬಳಿಕ ಭಾರತವು ಈ ಮಾರ್ಗಗಳನ್ನು ಬಂದ್ ಮಾಡಿತ್ತು. ಅದಕ್ಕೂ ಮುನ್ನ ಈ ಮಾರ್ಗಗಳಲ್ಲಿ ಎರಡೂ ದೇಶಗಳ ಗಡಿಭಾಗದ ಜನರ ನಡುವೆ ಕೊಡುಕೊಳ್ಳುವಿಕೆಯ ವ್ಯವಹಾರ ನಡೆಯುತ್ತಿತ್ತು. ಈಗ ಅದು ಪುನರಾರಂಭಗೊಳ್ಳುತ್ತದೆ.
ಲಿಪುಲೇಖ್ ಪಾಸ್ನಲ್ಲಿ ಯಾವ್ಯಾವ ಸರಕುಗಳ ವ್ಯಾಪಾರ ನಡೆಯುತ್ತದೆ…?
ಭಾರತ, ಟಿಬೆಟ್, ನೇಪಾಳ ಗಡಿಭಾಗದಲ್ಲಿರುವ ಬುಡಕಟ್ಟು ಸಮುದಾಯದ ಜನರು ತಮ್ಮ ಸರಕುಗಳನ್ನು ಮಾರಲು ಮತ್ತು ಕೊಳ್ಳಲು ಈ ಮಾರ್ಗದ ಬಳಕೆ ಮಾಡುತ್ತಾರೆ. ಭಾರತದ ಭಾಗದ ಜನರು ಬೆಲ್ಲ, ಮಸಾಲೆ, ತಂಬಾಕು ಇತ್ಯಾದಿ ಉತ್ಪನ್ನಗಳನ್ನು ರಫ್ತು ಮಾಡುತ್ತಾರೆ. ಟಿಬೆಟ್ನಿಂದ ಕುರಿಯ ಉಣ್ಣೆ, ಮೇಕೆ, ರೇಷ್ಮೆ ಇತ್ಯಾದಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ನೇಪಾಳದ ಆಕ್ಷೇಪ ಏನು?
ಲಿಪುಲೇಖ್ ಪಾಸ್ ಮೂಲಕ ಭಾರತ ಮತ್ತು ಚೀನಾ ಮಧ್ಯೆ ವ್ಯಾಪಾರ ನಡೆಯುವುದಕ್ಕೆ ನೇಪಳ ಮೊದಲಿಂದಲೂ ತಗಾದೆ ಎತ್ತುತ್ತಿದೆ. ಲಿಪುಲೇಖ್ ಎಂಬುದು ತನಗೆ ಸೇರಿದ ಪ್ರದೇಶ ಎಂದು ನೇಪಾಳ ಹೇಳಿಕೊಳ್ಳುತ್ತದೆ.
For More Updates Join our WhatsApp Group :




