ವಾಷಿಂಗ್ಟನ್: ಭಾರತದ ಆಮದು ಸರಕುಗಳ ಮೇಲೆ 50% ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇದೀಗ ಭಾರತದ ಜೊತೆಗಿನ ವ್ಯಾಪಾರ ಸಂಬಂಧವನ್ನು ʻಏಕಪಕ್ಷೀಯ ವಿಪತ್ತುʼ ಒನ್ ಡೈಡ್ ಡಿಸಾಸ್ಟರ್ ಎಂದು ಕರೆದಿದ್ದಾರೆ.
ಭಾರತದೊಂದಿಗಿನ ವ್ಯಾಪಾರ ಸಂಬಂಧಗಳ ಕುರಿತು ಸೋಮವಾರ ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಭಾರತವು ಅಮೆರಿಕಕ್ಕೆ ಹೆಚ್ಚಿನ ಸರಕುಗಳನ್ನು (Goods) ರಫ್ತು ಮಾಡುತ್ತದೆ. ನಮ್ಮೊಂದಿಗೆ ಅಪಾರ ಪ್ರಮಾಣದ ವ್ಯವಹಾರ ಮಾಡುತ್ತಾರೆ. ಇದು ಬಹಳ ಕಡಿಮೆ ಜನರಿಗೆ ತಿಳಿದಿದೆ. ಅವರು ನಮಗೆ ಬೃಹತ್ ಪ್ರಮಾಣದ ಸರಕುಗಳನ್ನು ರಫ್ತು ಮಾಡುವುದರಿಂದ ಭಾರತದ ಅತಿದೊಡ್ಡ ಕ್ಲೈಂಟ್ ನಾವಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಭಾರತ ನಮಗೆ ಬೃಹತ್ ಪ್ರಮಾಣದ ಸರಕು ರಫ್ತು ಮಾಡುತ್ತದೆ. ಆದ್ರೆ ನಾವು ಭಾರತದೊಂದಿಗೆ ಬಹಳ ಕಡಿಮೆ ವ್ಯವಹಾರ ಮಾಡುತ್ತೇವೆ. ಕಡಿಮೆ ಸರಕುಗಳನ್ನ ರಫ್ತು ಮಾಡುತ್ತೇವೆ. ಇಲ್ಲಿಯವರೆಗೆ ಸಂಪೂರ್ಣವಾಗಿ ಏಕಪಕ್ಷೀಯ ಸಂಬಂಧ ಇದಾಗಿದೆ. ಇದು ಹಲವು ದಶಕಗಳಿಂದ ನಡೆತ್ತಿರುವ ‘ಏಕಪಕ್ಷೀಯ ವಿಪತ್ತು’ ಎಂದು ಟ್ರಂಪ್ ಕರೆದಿದ್ದಾರೆ.
ಅಲ್ಲದೇ ಇಲ್ಲಿಯವರೆಗೆ ಭಾರತವು ವಿಶ್ವದಲ್ಲೇ ಅತ್ಯಧಿಕ ಆಮದು ಸುಂಕವನ್ನು ವಿಶಿಸುತ್ತಿದೆ. ಆದ ಕಾರಣ ಅಮೆರಿಕದ ಕಂಪನಿಗಳು ಭಾರತದಲ್ಲಿ ವ್ಯಾಪಾರ ಮಾಡಲು ಕಷ್ಟಕರವೆನಿಸಿದೆ. ಅಲ್ಲದೇ ಭಾರತವು ರಷ್ಯಾದಿಂದ ಬೃಹತ್ ಪ್ರಮಾಣದಲ್ಲಿ ತೈಲ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸುತ್ತದೆ. ಆದ್ರೆ ಅಮೆರಿಕದಿಂದ ಕಡಿಮೆ ಖರೀದಿ ಮಾಡುತ್ತದೆ ಎಂದು ಉಲ್ಲೇಖಿಸಿದ್ದಾರೆ.