ನವದೆಹಲಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ, ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿರುವ ಸದ್ಗುರು ಜಗ್ಗಿ ವಾಸುದೇವ್, ಹಿಂದೂಗಳ ಮೇಲಿನ ದೌರ್ಜನ್ಯಗಳು ಕೇವಲ ಬಾಂಗ್ಲಾದೇಶದ ಆಂತರಿಕ ವಿಷಯವಲ್ಲ ಎಂದಿದ್ದಾರೆ. ಬಾಂಗ್ಲಾದಲ್ಲಿ ವಾಸಿಸುವ ಅಲ್ಪಸಂಖ್ಯಾತರನ್ನು ರಕ್ಷಿಸಲು ವಿಫಲವಾದರೆ ಇಂಡಿಯಾ ಅಥವಾ ಭಾರತವು ಬಲಿಷ್ಠ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶದಲ್ಲಿರುವ ಹಿಂದೂಗಳನ್ನು ರಕ್ಷಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಇಶಾ ಫೌಂಡೇಶನ್‌ನ ಸಂಸ್ಥಾಪಕ, ಆಧ್ಯಾತ್ಮಿಕ ಗುರುಗಳಾದ ಸದ್ಗುರು ಒತ್ತಾಯಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ‘ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಕೇವಲ ಬಾಂಗ್ಲಾದೇಶದ ಆಂತರಿಕ ವಿಷಯವಲ್ಲ. ನಮ್ಮ ನೆರೆಹೊರೆಯಲ್ಲಿರುವ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಾತ್ರಿಪಡಿಸಲು ನಾವು ಆದಷ್ಟು ಬೇಗ ಎದ್ದುನಿಂತು ಕಾರ್ಯನಿರ್ವಹಿಸದಿದ್ದರೆ ಭಾರತವು ಮಹಾ–ಭಾರತವಾಗುವುದಿಲ್ಲ. ದುರದೃಷ್ಟವಶಾತ್ ಬಾಂಗ್ಲಾ ನಮ್ಮ ನೆರೆಯ ರಾಷ್ಟ್ರವಾಗಿದೆ. ನಮ್ಮ ನೆಲದ ನಾಗರಿಕರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಬಾಂಗ್ಲಾದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡುವಂತೆ ಮಾಡಿತು.ಹಿಂದೂಗಳು ಹಿಂಸಾಚಾರಕ್ಕೆ ಒಳಗಾದರು. ಬಾಂಗ್ಲಾದೇಶದ 27 ಜಿಲ್ಲೆಗಳಲ್ಲಿ ಹಿಂದೂ ಮನೆಗಳು ಮತ್ತು ವ್ಯಾಪಾರ ಮಳಿಗೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ರೀತಿಯ ದುಷ್ಕೃತ್ಯಗಳಿಂದ ನಿಜವಾಗಿ ಭಾರತೀಯ ನಾಗರಿಕತೆಗೆ ಸೇರಿದವರನ್ನು ರಕ್ಷಿಸುವುದು ಭಾರತದ ಜವಾಬ್ದಾರಿಯಾಗಿದೆ ಎಂದು ಸದ್ಗುರು ಹೇಳಿದ್ದಾರೆ.