ನವದೆಹಲಿ: ಗಗನಯಾನ ಮಿಷನ್ ಅಡಿಯಲ್ಲಿ ಭಾರತದ ಓರ್ವ ಗಗನಯಾತ್ರಿಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ಯುಎಸ್ ಮೂಲದ ಖಾಸಗಿ ಬಾಹ್ಯಾಕಾಶ ಅನ್ವೇಷಣಾ ಕಂಪನಿ ಆಕ್ಸಿಯೋಮ್ ಸ್ಪೇಸ್ನೊಂದಿಗೆ ಇಸ್ರೊ ಮತ್ತು ನಾಸಾ ಜಂಟಿ ಒಪ್ಪಂದ ಮಾಡಿಕೊಂಡಿವೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
“ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಓರ್ವ ಭಾರತೀಯ ಗಗನಯಾತ್ರಿಯನ್ನು ಕಳುಹಿಸಲು ಇಸ್ರೊ ನಾಸಾದೊಂದಿಗೆ ಜಂಟಿಯಾಗಿ ಕೆಲಸ ಮಾಡುತ್ತಿದೆ.” ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಡಾ. ಡಾ.ಜಿತೇಂದ್ರ ಸಿಂಗ್ ಹೇಳಿದರು.
ಏನಿದು ಭಾರತದ ಗಗನಯಾನ ಮಿಷನ್? : ಗಗನಯಾನ ಇದು 2025 ರಲ್ಲಿ ಉಡಾವಣೆಯಾಗಲಿರುವ ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ಕಾರ್ಯಾಚರಣೆಯಾಗಿದ್ದು, ಮೂರು ದಿನಗಳ ಕಾಲ ಮಾನವರನ್ನು ಹೊತ್ತ ನೌಕೆಯು ಬಾಹ್ಯಾಕಾಶಕ್ಕೆ ಹಾರಲಿದೆ. ಇದು ಭೂಮಿಯಿಂದ 400 ಕಿ.ಮೀ ಎತ್ತರದ ಕಕ್ಷೆಗೆ ತಲುಪಿ ಮತ್ತೆ ಹಿಂದಿರುಗಲಿದೆ.
ಫೆಬ್ರವರಿಯಲ್ಲಿ ಇಸ್ರೋದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಈ ಐತಿಹಾಸಿಕ ಗಗನಯಾನ ಯೋಜನೆಗೆ ಆಯ್ಕೆಯಾದ ನಾಲ್ವರು ಗಗನಯಾತ್ರಿಗಳ ಹೆಸರನ್ನು ಘೋಷಿಸಿದ್ದರು.
ಗಗನಯಾನ ಯೋಜನೆಗೆ ಆಯ್ಕೆಯಾದ ಗಗನಯಾತ್ರಿಗಳು : ಗಗನಯಾತ್ರಿಗಳಾದ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಜಿತ್ ಕೃಷ್ಣನ್ ಮತ್ತು ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಪ್ರಸ್ತುತ ದೇಶದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾತ್ರೆಗಾಗಿ ತೀವ್ರ ತರಬೇತಿ ಪಡೆಯುತ್ತಿದ್ದಾರೆ. ಗಗನಯಾತ್ರಿಗಳು ರಷ್ಯಾದಲ್ಲಿ ಬಾಹ್ಯಾಕಾಶ ಯಾನದ ಮೂಲ ಮಾಡ್ಯೂಲ್ ಗಳಲ್ಲಿ ಯಶಸ್ವಿಯಾಗಿ ತರಬೇತಿ ಪಡೆದಿದ್ದಾರೆ. ಪ್ರಸ್ತುತ, ಇವರು ಬೆಂಗಳೂರಿನ ಇಸ್ರೋದ ಗಗನಯಾತ್ರಿಗಳ ತರಬೇತಿ ಕೇಂದ್ರದಲ್ಲಿ (ಎಟಿಎಫ್) ತರಬೇತಿ ಪಡೆಯುತ್ತಿದ್ದಾರೆ.
ಸದ್ಯ ಈ ಮೂವರು ಗಗನಯಾತ್ರಿಗಳ ತರಬೇತಿ ಕಾರ್ಯಕ್ರಮದ ಮೂರು ಸೆಮಿಸ್ಟರ್ಗಳ ಪೈಕಿ ಎರಡು ಪೂರ್ಣಗೊಂಡಿವೆ. ಸ್ವತಂತ್ರ ತರಬೇತಿ ಸಿಮ್ಯುಲೇಟರ್ ಮತ್ತು ಸ್ಟ್ಯಾಟಿಕ್ ಮಾಕ್ಅಪ್ ಸಿಮ್ಯುಲೇಟರ್ಗಳ ತರಬೇತಿಯನ್ನು ಇವರು ಮುಗಿಸಿದ್ದಾರೆ ಎಂದು ಸಚಿವರು ಲೋಕಸಭೆಗೆ ಮಾಹಿತಿ ನೀಡಿದರು.
ಇದಲ್ಲದೆ, ಮಿಷನ್ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಹಂಚಿಕೊಂಡ ಸಚಿವರು, ಉಡಾವಣಾ ವಾಹನದ ಮಾನವ ರೇಟಿಂಗ್ಗಾಗಿ ಘನ, ದ್ರವ ಮತ್ತು ಕ್ರಯೋಜೆನಿಕ್ ಎಂಜಿನ್ ಸೇರಿದಂತೆ ಪ್ರೊಪಲ್ಷನ್ ವ್ಯವಸ್ಥೆಗಳ ಹಂತಗಳ ಮೂಲ ಪರೀಕ್ಷೆ ಪೂರ್ಣಗೊಂಡಿದೆ. ಐದು ರೀತಿಯ ಸಿಬ್ಬಂದಿ ರಕ್ಷಣಾ ವ್ಯವಸ್ಥೆಯ ಘನ ಮೋಟರ್ಗಳ ವಿನ್ಯಾಸ ಮತ್ತು ಪರೀಕ್ಷೆಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.