ನವದೆಹಲಿ: ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಶ್ರೀಲಂಕಾದ ಲೆಜೆಂಡರಿ ಸ್ಪಿನ್ನರ್ ರಂಗನಾ ಹೆರಾತ್ ಅವರನ್ನು ನ್ಯೂಜಿಲೆಂಡ್ ತಂಡ ತಮ್ಮ ಕ್ಯಾಂಪ್‌ಗೆ ಸೇರಿಸಿಕೊಂಡಿದೆ.
ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಅಫ್ಘಾನಿಸ್ತಾನದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಗುರುವಾರ ಭಾರತಕ್ಕೆ ಆಗಮಿಸಿದೆ. ಇದರ ನಂತರ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಭಾಗವಾಗಿ ಕಿವೀಸ್ ಭಾರತದ ವಿರುದ್ಧ ಮೂರು ರೆಡ್ಬಾಲ್ ಪಂದ್ಯಗಳನ್ನಾಡಲಿದೆ.
ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವು ಗ್ರೇಟರ್ ನೋಯ್ಡಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೈದಾನದಲ್ಲಿ ಸೆಪ್ಟೆಂಬರ್ 9 ರಿಂದ 13 ರವರೆಗೆ ನಡೆಯಲಿದೆ. ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗುವ ಸರಣಿಗಾಗಿ ಬ್ಲ್ಯಾಕ್ ಕ್ಯಾಪ್ಸ್ ನಂತರ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಲಿದೆ. ಕಿವೀಸ್ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದ ವಿರುದ್ಧ ಮೂರು ಟೆಸ್ಟ್‌ಗಳ ಸರಣಿಯನ್ನು ಆಡಲಿದೆ.
ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ಹೆರಾತ್ ಅವರನ್ನು ನ್ಯೂಜಿಲೆಂಡ್ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಿಸಿಕೊಂಡಿದೆ. ಬ್ಯಾಟಿಂಗ್ ಕೋಚ್ ಆಗಿ ರಾಥೋರ್ ಅವರು, ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಮಾತ್ರ ಕಿವೀಸ್ ತಂಡದೊಂದಿಗೆ ಇರಲಿದ್ದಾರೆ. ಈ ಹಿಂದೆ ಟೀಂ ಇಂಡಿಯಾಗೆ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಮತ್ತು ರವಿಶಾಸ್ತ್ರಿ ಅವರ ಅವಧಿಯಲ್ಲಿ ವಿಕ್ರಮ್ ರಾಥೋರ್ ಬ್ಯಾಟಿಂಗ್ ಕೋಚ್ ಆಗಿದ್ದರು.
ಈ ವರ್ಷದ ಜೂನ್ನಲ್ಲಿ ನಡೆದ ಟಿ-20 ವಿಶ್ವಕಪ್ನಲ್ಲಿ ಅವರ ಕೋಚ್ ಅವಧಿ ಮುಕ್ತಾಯಗೊಂಡಿತ್ತು. ಈ ವಿಶ್ವಕಪ್ನಲ್ಲಿ ಭಾರತ ದಕ್ಷಿಣ ಆಫ್ರಿಕಾದ ವಿರುದ್ಧ ಗೆದ್ದು ಬೀಗಿತ್ತು. ಈ ಮೂಲಕ 11 ವರ್ಷಗಳ ನಂತರ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿತ್ತು.
ರಾಥೋರ್ ಮತ್ತು ಹೆರಾತ್ ಅವರ ಸೇರ್ಪಡೆಯನ್ನು ನ್ಯೂಜಿಲೆಂಡ್ ತಂಡ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. “ಶ್ರೀಲಂಕಾದ ಸ್ಪಿನ್ ಮಾಂತ್ರಿಕ ರಂಗನಾ ಹೆರಾತ್ ಅವರನ್ನು ಏಷ್ಯಾದಲ್ಲಿ ಮುಂಬರುವ ಮೂರು ಟೆಸ್ಟ್‌ಗಳಿಗೆ ಸ್ಪಿನ್-ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ” ಎಂದು ನ್ಯೂಜಿಲೆಂಡ್ ತಂಡ ತಿಳಿಸಿದೆ.