ತಮಿಳುನಾಡು : ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯ ವನಿತೆಯರು ಇಂದು ಹೊಸ ಹಾಗೂ ಐತಿಹಾಸಿಕ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ 500 ರನ್‌ಗಳ ಬೃಹತ್ ಮೊತ್ತ ಪೇರಿಸಿದರು.
ಇದಕ್ಕೂ ಮುನ್ನ ಸ್ಟಾರ್ ಬ್ಯಾಟರ್ಗಳಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಮೊದಲ ವಿಕೆಟ್‌ಗೆ 192 ರನ್ ಪೇರಿಸಿ ಅತ್ಯಧಿಕ ಜೊತೆಯಾಟದ ದಾಖಲೆ ಬರೆದರು. ಅಷ್ಟೇ ಅಲ್ಲ, ಶಫಾಲಿ ವರ್ಮಾ ತಮ್ಮ ಚೊಚ್ಚಲ ದ್ವಿಶತಕ ಸಿಡಿಸಿ ಸಂಭ್ರಮಿಸಿದರು. ಇದು ಟೆಸ್ಟ್ ಇತಿಹಾಸದಲ್ಲೇ ಅತಿವೇಗದ ಡಬಲ್ ಸೆಂಚುರಿಯೂ ಹೌದು
292 ರನ್ ದಾಖಲೆಯ ಜೊತೆಯಾಟ: ಈ ಆಟಗಾರ್ತಿಯರು ತಮ್ಮ ಶತಕದ ನಂತರವೂ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದರು. ಇದರ ನಡುವೆ 150 ರನ್‌ಗಳ ಗಡಿಯಲ್ಲಿ ಸ್ಮೃತಿ ಮಂಧಾನ (149) ವಿಕೆಟ್ ಒಪ್ಪಿಸಿದರು. ಆದರೆ, ಅವರು ನಿರ್ಗಮಿಸುವ ಮುನ್ನ 26 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಆಕರ್ಷಕ ಹಾಗೂ ಸ್ಮರಣೀಯ ಇನಿಂಗ್ಸ್ ಕಟ್ಟಿದರು. ಶಫಾಲಿ ವರ್ಮಾ ಜೊತೆ ಟೆಸ್ಟ್‌ನಲ್ಲಿ ಮೊದಲ ವಿಕೆಟ್‌ಗೆ ಅತ್ಯಧಿಕ 292 ರನ್‌ಗಳ ಜೊತೆಯಾಟದ ದಾಖಲೆ ನಿರ್ಮಿಸಿದರು.
2004ರಲ್ಲಿ ಕರಾಚಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನದ ಸಜ್ಜಿದಾ ಶಾ ಮತ್ತು ಕಿರಣ್ ಬಲೂಚ್ ಮೊದಲ ವಿಕೆಟ್‌ಗೆ 241 ರನ್‌ಗಳ ಜೊತೆಯಾಟ ಒದಗಿಸಿದ್ದರು. ಇದು ಇದುವರೆಗಿನ ದೊಡ್ಡ ಜೊತೆಯಾಟದ ದಾಖಲೆ. ಈ ದಾಖಲೆಯನ್ನು ಶಫಾಲಿ ಮತ್ತು ಸ್ಮೃತಿ ಅಳಿಸಿ ಹಾಕಿದರು. ಅಲ್ಲದೇ, ಶಫಾಲಿ ಮತ್ತು ಸ್ಮೃತಿ 2021ರಲ್ಲಿ ಬ್ರಿಸ್ಟಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ತಾವೇ ನಿರ್ಮಿಸಿದ್ದ ಆರಂಭಿಕ 167 ರನ್‌ಗಳ ಜೊತೆಯಾಟದ ದಾಖಲೆಯನ್ನೂ ಮೆಟ್ಟಿ ನಿಂತರು.
ಇಷ್ಟೇ ಅಲ್ಲ, ಈ ಜೋಡಿ ಮಹಿಳಾ ಟೆಸ್ಟ್‌ನಲ್ಲಿ ಯಾವುದೇ ವಿಕೆಟ್‌ಗೆ ಎರಡನೇ ಅತ್ಯಧಿಕ ಜೊತೆಯಾಟದ ದಾಖಲೆಯನ್ನೂ ಸೃಷ್ಟಿಸಿತು. 1987ರಲ್ಲಿ ವೆದರ್‌ಬಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೂರನೇ ವಿಕೆಟ್‌ಗೆ ಆಸ್ಟ್ರೇಲಿಯಾದ ಎಲ್ಎ ರೀಲರ್ ಮತ್ತು ಡಿಎ ಆನೆಟ್ಸ್ ಅವರು 309 ರನ್‌ಗಳ ಅತ್ಯಧಿಕ ಜೊತೆಯಾಟ ನೀಡಿದ್ದರು. 2014ರಲ್ಲಿ ಮೈಸೂರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪೂನಮ್ ರಾವುತ್ ಮತ್ತು ತಿರುಶ್ ಕಾಮಿನಿ ಕಲೆ ಹಾಕಿದ್ದ 275 ರನ್ ಭಾರತದ ಅತ್ಯುನ್ನತ ಜೊತೆಯಾಟವನ್ನೂ ಈ ಜೋಡಿ ಮುರಿಯಿತು.
ಮೊದಲ ದಿನವೇ 525 ರನ್‌ಗಳ ಶಿಖರ : ಇಂದಿನ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾದ ಆಟಗಾರ್ತಿಯರು 98 ಓವರ್ಗಳಲ್ಲಿ 525 ರನ್‌ಗಳ ಬೃಹತ್ ಶಿಖರ ಕಟ್ಟಿದರು. ಇದುವರೆಗೂ ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ದಿನದಲ್ಲಿ ಗರಿಷ್ಠ 431 ರನ್ ಮಾತ್ರ ಕಲೆ ಹಾಕಲಾಗಿತ್ತು. ಆದರೆ, ಭಾರತೀಯ ವನಿತೆಯರು ಕೇವಲ 4 ವಿಕೆಟ್ ಕಳೆದುಕೊಂಡು 500 ರನ್‌ಗಳ ಗಡಿ ದಾಟಿ ಐತಿಹಾಸಿಕ ದಿನಕ್ಕೆ ಸಾಕ್ಷಿಯಾದರು.
ಶಫಾಲಿ ವರ್ಮಾ 205, ಸ್ಮೃತಿ ಮಂಧಾನ 149, ಶುಭಾ ಸತೀಶ್ 15, ಜೆಮಿಮಾ ರಾಡ್ರಿಗಸ್ 55 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರೆ, ನಾಯಕಿ ಹರ್ಮನ್ಪ್ರೀತ್ ಕೌರ್ 42, ವಿಕೆಟ್ ಕೀಪರ್ ರಿಚಾ ಘೋಷ್ 43 ರನ್ ಬಾರಿಸಿ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಪರ ಡೆಲ್ಮಿ ಟಕರ್ 2 ಹಾಗೂ ನಾಡಿನ್ ಡಿ ಕ್ಲರ್ಕ್ 1 ವಿಕೆಟ್ ಪಡೆಯಲು ಮಾತ್ರ ಸಫಲರಾದರು