ಬೆಂಗಳೂರು: ಇನ್‌ಸ್ಟಾಗ್ರಾಮ್‌ನಲ್ಲಿ ಕಿವುಡರು ಹಾಗೂ ಮೂಗರನ್ನು ಅಪಹಾಸ್ಯ ಮಾಡುವ ಹಾಗೂ ಮನನೋಯಿಸುವ ರೀತಿಯಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದ ರೇಡಿಯೋ ಜಾಕಿ ಸೇರಿ ಇಬ್ಬರು ಯುವಕರನ್ನು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ರೋಹನ್ ಕಾರಿಯಪ್ಪ ಮತ್ತು ಶರವಣ ಭಟ್ಟಾಚಾರ್ಯ ಬಂಧಿತರಾದವರಾಗಿದ್ದಾರೆ. ರೋಹನ್ ಕಾರ್ಯಪ್ಪ ಅವರು ಎಫ್‌ಎಂ ರೇಡಿಯೊದಲ್ಲಿ ಜಾಕಿಯಾಗಿ ಕೆಲಸ ಮಾಡುತ್ತಿದ್ದರೆ, ಶರವಣ ಅವರು ಮನೆಯಲ್ಲೇ ಇದ್ದರು. ಯುವ ರಾಜಕಾರಣಿಗಳನ್ನು ಅಣಕಿಸುವ ಭರದಲ್ಲಿ ವಾಕ್ ಮತ್ತು ಶ್ರವಣದೋಷವುಳ್ಳವರ ಕುರಿತು ಅವಹೇಳನಕಾರಿಯಾಗಿ ರೀಲ್ಸ್ ಮಾಡಿದ್ದರು ಎನ್ನಲಾಗಿದೆ.
ರೋಹನ್ ಅವರು ಹಿಂದಿ ಭಾಷೆಯಲ್ಲಿ ರಾಜಕೀಯದ ಕುರಿತು ಮಾತನಾಡಿದ್ದರೆ, ಶರವಣ ಅದನ್ನು ಸನ್ನೆಯಲ್ಲಿ ಮಾಡಿ ಅವಹೇಳನ ಆಗುವಂತೆ ತೋರಿಸಿದ್ದರು ಎಂಬ ಆರೋಪವಿದೆ.
ಆ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಈ ವೀಡಿಯೊಗೆ ಆಕ್ಷೇಪ ವ್ಯಕ್ತವಾದ ಮೇಲೆ ಡಿಲೀಟ್ ಮಾಡಿ ಕ್ಷಮೆ ಕೋರಿದ್ದರು ಎಂದು ಮೂಲಗಳು ತಿಳಿಸಿವೆ.