ಮುಂಬೈ: ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ನಡೆದ ಐಪಿಎಲ್ ಫ್ರಾಂಚೈಸ್ ಮಾಲೀಕರ ಸಭೆಯಲ್ಲಿ ‘ಕೋಲ್ಕತ್ತ ನೈಟ್ ರೈಡರ್ಸ್’ ತಂಡದ ಮಾಲೀಕ ಶಾರುಕ್ ಖಾನ್ ಮತ್ತು ‘ಪಂಜಾಬ್ ಕಿಂಗ್ಸ್’ ತಂಡದ ಸಹಮಾಲೀಕ ನೆಸ್ ವಾಡಿಯಾ ನಡುವೆ ತೀವ್ರ ವಾಗ್ವಾದ ನಡೆದಿದೆ ಎಂದು ವರದಿಯಾಗಿದೆ.
ನಿನ್ನೆ(ಜುಲೈ 31) ನಡೆದ ಈ ಸಭೆಯಲ್ಲಿ 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆ, ರೈಟ್ ಟು ಮ್ಯಾಚ್ ಕಾರ್ಡ್ ಅನುಮತಿಸುವ ಬಗ್ಗೆ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಬಗ್ಗೆ ಚರ್ಚೆಯಾಗಿದೆ ಎನ್ನಲಾಗಿದೆ.
ಈ ವೇಳೆ ಮೆಗಾ ಹರಾಜಿಗೂ ಮುನ್ನ ಹೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳುವುದಕ್ಕೆ ಅವಕಾಶ ನೀಡಬೇಕೆಂದು ಶಾರುಕ್ ಮನವಿ ಮಾಡಿದ್ದು, ಇದಕ್ಕೆ ನೆಸ್ ವಾಡಿಯಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ ಎಂದು ಕ್ರಿಕ್ಬಸ್ ವರದಿ ತಿಳಿಸಿದೆ.
ವರದಿ ತಳ್ಳಿಹಾಕಿರುವ ನೆಸ್ ವಾಡಿಯಾ, ‘ಶಾರುಕ್ ಖಾನ್ ಅವರನ್ನು ನಾನು 25 ವರ್ಷದಿಂದ ಬಲ್ಲೆ. ಇಲ್ಲಿ ಯಾವುದೇ ದ್ವೇಷ ಇಲ್ಲ. ಎಲ್ಲರೂ ಅವರವರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೊನೆಯಲ್ಲಿ ಎಲ್ಲರಿಗೂ ಸರಿಹೊಂದುವಂತೆ ನಿರ್ಧಾರ ಕೈಗೊಳ್ಳಬೇಕಿದೆ ಅಷ್ಟೇ’ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಇಷ್ಟೇ ಅಲ್ಲದೆ ಮೆಗಾ ಹರಾಜು ಪ್ರಕ್ರಿಯೆಗೆ ಶಾರುಕ್ ವಿರೋಧ ವ್ಯಕ್ತಪಡಿಸಿದ್ದು, ಮೆಗಾ ಹರಾಜು ನಡೆಸುವ ಬದಲು ಸಣ್ಣ ಸಣ್ಣ ಹರಾಜು ನಡೆಸುವ ಬಗ್ಗೆ ಚಿಂತಿಸಬೇಕಿದೆ ಎಂದು ಹೇಳಿದ್ದಾರೆ. ಇದಕ್ಕೆ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸ್ ಮಾಲಕಿ ಕಾವ್ಯಾ ಮಾರನ್ ಧ್ವನಿಗೂಡಿಸಿದ್ದು, ‘ಒಂದು ತಂಡ ಕಟ್ಟಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ’ ಎಂದು ಹೇಳಿದ್ದಾರೆ.