ಮೋದಿ ಭೇಟಿ ವೇಳೆ ಇರಾನ್ ದಾಳಿ ಪ್ಲಾನ್?

ಮೋದಿ ಭೇಟಿ ವೇಳೆ ಇರಾನ್ ದಾಳಿ ಪ್ಲಾನ್?

ಇಸ್ರೇಲ್ ರಾಯಭಾರಿಯಿಂದ ಸ್ಪಷ್ಟನೆ.

ನವದೆಹಲಿ: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಸೇನಾ ದಾಳಿ ನಡೆಸುವುದಕ್ಕೂ ಎರಡು ದಿನ ಮುನ್ನ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರವಾಸದಲ್ಲಿದ್ದರು. ಇದು ಬಹಳಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ದಾಳಿ ನಡೆಸಲು ಮೋದಿ ಭೇಟಿ ವೇಳೆಯೇ ಇಸ್ರೇಲ್ ಸಿದ್ಧತೆ ನಡೆಸಿಕೊಂಡಿತ್ತಾ? ಇರಾನ್ ಮೇಲಿನ ದಾಳಿ ಕುರಿತು ಮೋದಿ ಜೊತೆ ಚರ್ಚಿಸಿತ್ತಾ? ಈ ರೀತಿಯ ಪ್ರಶ್ನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆದ ಕೆಲವು ದಿನಗಳಿಂದ ಹರಿದಾಡಿದ್ದವು. ಈಗ ಅವುಗಳಿಗೆ ಸ್ಪಷ್ಟನೆ ದೊರೆತಿದೆ. ಖುದ್ದು ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಸ್ಪಷ್ಟನೆ ನೀಡಿದ್ದಾರೆ.

ಇಸ್ರೇಲ್ ರಾಯಭಾರಿ ಹೇಳಿದ್ದೇನು?

ಇರಾನ್ ಮೇಲೆ ದಾಳಿ ನಡೆಸುವ ಕುರಿತು ಮೋದಿ ಇಸ್ರೇಲ್ ಭೇಟಿ ವೇಳೆ ನಮಗೇ ಗೊತ್ತಿರಲಿಲ್ಲ. ಮೋದಿ ನಿರ್ಗಮಿಸಿದ ನಂತರವೇ ಸೇನಾ ಕಾರ್ಯಾಚರಣೆಯ ಅವಕಾಶದ ಬಗ್ಗೆ ಚರ್ಚೆಯಾಗಿತ್ತು. ಮೋದಿ ಭೇಟಿ ವೇಳೆ ಪ್ರಾದೇಶಿಕ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದೇವೆಯೇ ಹೊರತು ಇನ್ನೇನೂ ಚರ್ಚೆ ಆಗಿಲ್ಲ. ನಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ನಾವು ಬೇರೆಯವರೊಂದಿಗೆ ಮಾಹಿತಿ ಹಂಚಿಕೊಳ್ಳುವುದು ಸಾಧ್ಯವೇ ಎಂದು ಇಸ್ರೇಲ್ ರಾಯಭಾರಿ ರುವೆನ್ ಅಜರ್ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್​’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮೋದಿ ಭಾರತಕ್ಕೆ ತೆರಳಿದ ನಂತರ, ಇರಾನ್ ಮೇಲೆ ದಾಳಿ ಮಾಡುವ ನಿರ್ಧಾರ ತೆಗೆದುಕೊಳ್ಳಲು ಎರಡು ದಿನಗಳು ಬೇಕಾಯಿತು. ಶನಿವಾರ (ಫೆಬ್ರವರಿ 28) ಬೆಳಿಗ್ಗೆ ದಾಳಿ ನಡೆಸುವ ಬಗ್ಗೆ ಸಂಪುಟದ ಭದ್ರತಾ ಸಮಿತಿಯ ಅನುಮೋದನೆ ಪಡೆಯಲಾಯಿತು ಎಂದು ಅವರು ಹೇಳಿದ್ದಾರೆ.

ಫೆಬ್ರವರಿ 25 ಮತ್ತು 26 ರಂದು ಪ್ರಧಾನಿ ಮೋದಿ ಇಸ್ರೇಲ್​ಗೆ ಎರಡು ದಿನಗಳ ಭೇಟಿ ನೀಡಿದ್ದರು. ದಶಕಗಳ ರಾಜತಾಂತ್ರಿಕ ನಿರ್ಬಂಧವನ್ನು ಕೊನೆಗೊಳಿಸಿ ಭಾರತ-ಇಸ್ರೇಲ್ ಸಂಬಂಧಗಳನ್ನು ಸಂಪೂರ್ಣವಾಗಿ ಮುಕ್ತಗೊಳಿಸಿದ ಸಂದರ್ಭ 2017 ರಲ್ಲಿ ಮೋದಿ ಅಲ್ಲಿಗೆ ಭೇಟಿ ನೀಡಿದ್ದರು. ಅದಾದ ನಂತರ ಮೋದಿ ಇಸ್ರೇಲ್​ಗೆ ಭೇಟಿ ನೀಡಿದ್ದು ಇದೇ ಮೊದಲು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆಗಿನ ಮಾತುಕತೆಯ ನಂತರ ಎರಡೂ ದೇಶಗಳು 17 ಒಪ್ಪಂದಗಳಿಗೆ ಸಹಿ ಹಾಕಿವೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *