ನವದೆಹಲಿ: ಹಾಸನದ ಮಾಜಿ ಶಾಸಕ ಪ್ರೀತಂಗೌಡರನ್ನು ಪಾದಯಾತ್ರೆ ಸಭೆಗೆ ಕರೆಸಿದ್ದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವರು, ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು, ದೇವೆಗೌಡರ ಕುಟುಂಬಕ್ಕೆ ವಿಷ ಇಟ್ಟವನೊಂದಿಗೆ ವೇದಿಕೆ ಹಂಚಿಕೊಳ್ಳಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ನವದೆಹಲಿಯಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡುತ್ತಾ, ಪಾದಯಾತ್ರೆಯಲ್ಲಿ ಭಾಗಿಯಾಗಬಾರದು ಎಂದು ಜೆ.ಟಿ.ದೇವೇಗೌಡರ ಅಧ್ಯಕ್ಷತೆಯ ಕೋರ್ ಕಮಿಟಿ ಬೆಂಗಳೂರಿನಲ್ಲಿ ಮಂಗಳವಾರ ತೀರ್ಮಾನ ಮಾಡಿದೆ. ಬಿಜೆಪಿ ನಾಯಕರು ಪಾದಯಾತ್ರೆ ಮಾಡಬೇಕು ಎಂದು ನಿರ್ಧಾರ ಕೈಗೊಂಡು ಸಿದ್ಧತೆ ಮಾಡುತ್ತಿದ್ದಾರೆ. ಆದರೆ, ಪಾದಯಾತ್ರೆಗೆ ಇದು ಸೂಕ್ತ ಸಂದರ್ಭವಲ್ಲ ಎನ್ನುವ ಕಾರಣಕ್ಕೆ ನಾವು ಈ ಪದಯತ್ರೆಯಿಂದ ಹಿಂದೆ ಸರಿದಿದ್ದೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಕೋರ್ ಕಮಿಟಿ ಸಭೆಯಲ್ಲಿ ಪಾದಯಾತ್ರೆ ಬಗ್ಗೆ ನಮ್ಮ ನಾಯಕರು ವಿಸ್ತೃತವಾಗಿ ಚರ್ಚೆ ನಡೆಸಿದ್ದಾರೆ. ಎಲ್ಲರ ಅಭಿಪ್ರಾಯವೂ ಪಾದಯಾತ್ರೆ ಸದ್ಯಕ್ಕೆ ಬೇಡ, ಸ್ವಲ್ಪ ದಿನದ ನಂತರ ಮಾಡೋಣ ಎನ್ನುವುದೇ ಆಗಿದೆ. ಕೊಡಗು ಜಿಲ್ಲೆಯ ಪಕ್ಕದಲ್ಲಿಯೇ ಇರುವ ಕೇರಳದ ವೈನಾಡಿನಲ್ಲಿ ಭಾರೀ ಭೂ ಕುಸಿತ ಉಂಟಾಗಿ ನೂರಾರು ಜನರು ಸಾವನ್ನಪ್ಪಿದ್ದಾರೆ ಎಂದರು.
ಇನ್ನೂ ಅನೇಕರು ಕಣ್ಮರೆಯಾಗಿದ್ದಾರೆ. ನಮ್ಮ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ರೆಡ್ ಅರ್ಲಟ್ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ನೆರೆ, ಭೂ ಕುಸಿತ ನಿರಂತರವಾಗಿದೆ. ಹೀಗಾಗಿ ಇಂಥ ಪರಿಸ್ಥಿತಿಯಲ್ಲಿ ಪಾದಯಾತ್ರೆ ಬೇಡ ಎನ್ನುವುದು ನಮ್ಮ ಪಕ್ಷದ ಅಭಿಪ್ರಾಯವಾಗಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.