ಚಿಕ್ಕಮಗಳೂರು: “ನಾನು ಹಗರಣ ಮಾಡಿದ್ದೀನಿ, ನಿಮ್ಮ ಹಗರಣವನ್ನು ತೆಗೆಯುತ್ತೀನಿ ಎಂಬ ಬ್ಲಾಕ್ಮೇಲ್ ತಂತ್ರಕ್ಕೆ ಮುಖ್ಯಮಂತ್ರಿಗಳು ಮೊರೆ ಹೋಗಿರುವುದು ಆಶ್ಚರ್ಯ, ಹಾಸ್ಯಾಸ್ಪದವಾಗಿದೆ. ವಾಲ್ಮೀಕಿ, ಮುಡಾ ಹಗರಣ ಬರುವ ತನಕ ಬಿಜೆಪಿ ಹಗರಣಗಳು ಗೊತ್ತಿರಲಿಲ್ಲವಾ?. ನಿಮ್ಮದೇ ಸರ್ಕಾರ ಇರುವಾಗ ಇಲ್ಲಿಯವರೆಗೂ ತನಿಖೆ ಯಾಕೆ ಮಾಡಲಿಲ್ಲ. ನಿಮ್ಮ ಕಾಲ ಬುಡಕ್ಕೆ ಬಂದಾಗ ಬಿಜೆಪಿ ಬಗ್ಗೆ ಹೇಳುತ್ತಿದ್ದೀರಿ” ಎಂದು ಶಾಸಕ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿಗಳು ಸದನದ ಒಳಗೆ ಎಷ್ಟೊಂದು ಸುಳ್ಳು ಹೇಳಿದ್ದಾರೆ. ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯಲ್ಲಿ 11 ಕೋಟಿ ಅವ್ಯವಹಾರ ಎಂದಿದ್ದಾರೆ. ಇನ್ನು ಸರ್ಕಾರ 11 ಕೋಟಿ ಹಣವನ್ನು ಬಿಡುಗಡೆಯೇ ಮಾಡಿಲ್ಲ. ಆಗಿದ್ದ ಮೇಲೆ ಅವ್ಯವಹಾರ ಹೇಗೆ ಆಗುತ್ತೆ, ಸದನದ ಒಳಗೆ ಇಷ್ಟೊಂದು ಸುಳ್ಳು ಹೇಳುವ ಮುಖ್ಯಮಂತ್ರಿಯನ್ನು ಈ ಹಿಂದೆ ಎಂದೂ ಕಂಡಿಲ್ಲ. ಅವ್ಯವಹಾರ ಆಗಿದ್ರೆ ಯಾವ ತನಿಖೆ ಅನ್ನಾದರೂ ಮಾಡಲಿ” ಎಂದು ಸವಾಲು ಹಾಕಿದರು.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗುಡ್ಡ ಕುಸಿತವಾದ ಶಿರೂರಿಗೆ ಭೇಟಿ ನೀಡುರುವ ಬಗ್ಗೆ ಡಿಸಿಎಂ ಡಿಕೆಶಿ ಟೀಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, “ಕೇಂದ್ರ ಸಚಿವ ಕುಮಾರಸ್ವಾಮಿ ಶಿರೂರಿಗೆ ಹೋಗಿದ್ದನ್ನು ಕಾಂಗ್ರೆಸ್ ಟೀಕೆ ಮಾಡುತ್ತೆ. ಪ್ರಾಕೃತಿಕ ವಿಕೋಪ, ಸಾವು ನೋವನ್ನು ಕಾಂಗ್ರೆಸ್ ಯಾವ ರೀತಿ ಸ್ವೀಕರಿಸಿದೆ. ಕಾಂಗ್ರೆಸ್ ಸ್ವೀಕರಿಸಿರುವ ಮನಸ್ಥಿತಿ ಈಗ ಅರ್ಥ ಆಗಿದೆ. ಯಾವ ವಿಚಾರದಲ್ಲೂ ಕಾಂಗ್ರೆಸ್ಗೆ ನೈಜ ಕಾಳಜಿ ಇಲ್ಲ ಎಂದು ಕಿಡಿಕಾರಿದರು