ಉತ್ತರ ಕನ್ನಡ : ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಮಳೆಯಿಂದ ಹಲವೆಡೆ ಹಾನಿಗಳು ಸಂಭವಿಸಿದ್ದು, ಕಾರವಾರ ತಾಲೂಕಿನ ಅರಗಾ ಗ್ರಾಮದಲ್ಲಿ ಕದಂಬ ನೌಕಾನೆಲೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಗುತ್ತಿಗೆ ಪಡೆದ ಕಂಪನಿ ಎಡವಟ್ಟಿನಿಂದ ಹೆದ್ದಾರಿಯಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ವ್ಯಾಪಕವಾಗಿ ಸುರಿಯುತ್ತಿರುವ ಮಳೆ ಮುಂದುವರೆದಿದೆ. ಕಾರವಾರ ತಾಲೂಕಿನಲ್ಲಿ ಇಂದು ಬೆಳಗ್ಗೆಯಿಂದ ಮಳೆ ಹೆಚ್ಚಾದ ಕಾರಣ ಅರಗಾ ಗ್ರಾಮದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಇನ್ನು ಗುಡ್ಡದ ಪಕ್ಕದಲ್ಲೇ ಗ್ರಾಮವಿದ್ದು, ಅಪಾರ ಪ್ರಮಾಣದಲ್ಲಿ ಗುಡ್ಡದ ಮೇಲಿನಿಂದ ನೀರು ಗ್ರಾಮದತ್ತ ಹರಿದು ಬಂದಿದೆ.
ನೀರು ಸಮುದ್ರಕ್ಕೆ ಸೇರಲು ಇರುವ ಮಾರ್ಗದಲ್ಲಿ ನೌಕಾನೆಲೆಯವರು ಕಾಂಪೌಂಡ್ಗಳನ್ನ ಹಾಕಿದ್ದು, ಇದರಿಂದ ನೀರು ಮುಂದೆ ಹೋಗದೇ ರಾಷ್ಟ್ರೀಯ ಹೆದ್ದಾರಿ 66 ರ ಮೇಲೆಯೇ ನಿಂತಿದೆ. ಸುಮಾರು ಒಂದು ಘಂಟೆಗೂ ಅಧಿಕ ಕಾಲ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದು, ಪ್ರತಿಬಾರಿ ಎದುರಾಗುವ ಈ ಸಮಸ್ಯೆಗೆ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಅರಗಾ ಗ್ರಾಮದಲ್ಲಿ ಕಳೆದ ನಾಲ್ಕೈದು ವರ್ಷದಿಂದ ಇದೇ ರೀತಿ ಕೃತಕ ನೆರೆ ಸೃಷ್ಟಿಯಾಗುತ್ತಿದ್ದು, ಮಳೆ ಹೆಚ್ಚಾದ ವೇಳೆಯಲ್ಲಿ ಹೆದ್ದಾರಿಯಲ್ಲಿ ನೀರು ತುಂಬಿ ಸಂಚಾರವೇ ಆಗಾಗ ಬಂದ್ ಆಗುತ್ತಿದೆ. ನೌಕಾನೆಲೆಯವರು ತಾವು ಹಾಕಿರುವ ಕಾಂಪೌಂಡ್ಗಳಲ್ಲಿ ಮಳೆಗಾಲದಲ್ಲಿ ನೀರು ಸಾಗುವಂತೆ ವ್ಯವಸ್ಥೆ ಮಾಡಿದರೆ ಇಂತಹ ಕೃತಕ ನೆರೆ ಸೃಷ್ಟಿಯಾಗುವುದಿಲ್ಲ. ಅಲ್ಲದೇ ರಾಷ್ಟ್ರೀಯ ಹೆದ್ದಾರಿ ಅರೆಬರೆಯಾಗಿದೆ. ಆದರೂ ಟೋಲ್ ವಸೂಲಾತಿ ಮಾಡಲಾಗುತ್ತಿದೆ. ಕಳೆದ ಐದಾರು ವರ್ಷಗಳಿಂದ ಇಲ್ಲಿ ನೀರು ತುಂಬುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ