ನವದೆಹಲಿ: ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಪ್ರತಿಷ್ಠಿತ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವುದು ಎಲ್ಲರಿಗೂ ಗೊತ್ತೇ ಇದೆ. 100 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. 92.97 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಈ ಸಾಧನೆಯಿಂದ ಇಡೀ ಪಾಕಿಸ್ತಾನವೇ ಅರ್ಷದ್ ನದೀಮ್ರನ್ನು ಕೊಂಡಾಡುತ್ತಿದೆ. ಅಲ್ಲದೆ, ಭರ್ಜರಿ ಸ್ವಾಗತವನ್ನು ಸಹ ಸಿಕ್ಕಿತು.
ನದೀಮ್ಗೆ ಪಾಕಿಸ್ತಾನದ ಸಿನಿಮಾ ತಾರೆಯರು, ಕ್ರಿಕೆಟರ್ಸ್, ಉದ್ಯಮಿಗಳು ಮತ್ತು ರಾಜಕಾರಣಿಗಳು ಉಡುಗೊರೆ ನೀಡಿದ್ದಾರೆ. ಅಲ್ಲದೆ, ನದೀಮ್ ಸಾಧನೆಯನ್ನು ಮನಸಾರೆ ಕೊಂಡಾಡುತ್ತಿದ್ದಾರೆ. ನದೀಮ್ ಅವರ ಮಾವ ಎಮ್ಮೆಯನ್ನು ಉಡುಗೊರೆಯಾಗಿ ನೀಡಿದ್ದು ಭಾರಿ ಸುದ್ದಿಯಾಗಿತ್ತು. ಎಮ್ಮೆಯನ್ನೇ ಯಾಕೆ ಗಿಫ್ಟ್ ಆಗಿ ನೀಡಿದರು ಎಂಬ ಚರ್ಚೆಯು ಆಗಿತ್ತು. ನದೀಮ್ ಅವರ ಗ್ರಾಮದಲ್ಲಿ ಎಮ್ಮೆಯನ್ನು ಗಿಫ್ಟ್ ಆಗಿ ನೀಡುವುದು ಒಂದು ಸಂಪ್ರದಾಯ. ಎಮ್ಮೆಯನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿ ನೋಡುತ್ತಾರೆ. ಎಮ್ಮೆಯನ್ನು ಉಡುಗೊರೆಯಾಗಿ ನೀಡುವುದು ಕೂಡ ದೊಡ್ಡ ಗೌರವದ ಭಾಗವಾಗಿದೆ.
ತಾಜಾ ಸಂಗತಿ ಏನೆಂದರೆ, ಮಾವ ಎಮ್ಮೆಯನ್ನು ಗಿಫ್ಟ್ ನೀಡಿದ್ದಕ್ಕೆ ನದೀಮ್ ಕೊಟ್ಟ ಪ್ರತಿಕ್ರಿಯೆ ಭಾರಿ ವೈರಲ್ ಆಗಿದೆ. ಇತ್ತೀಚೆಗೆ ನದೀಮ್ ಮತ್ತು ಅವರ ಪತ್ನಿ ಪಾಕಿಸ್ತಾನಿ ಮಾಧ್ಯಮಕ್ಕೆ ಸಂದರ್ಶನ ನೀಡಿದರು. ನಿಮ್ಮ ಮಾವ ಎಮ್ಮೆಯನ್ನು ಉಡುಗೊರೆಯಾಗಿ ನೀಡಿದ್ದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ನಿರೂಪಕ ಈ ವೇಳೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನದೀಮ್, ಎಮ್ಮೆಯ ಬದಲು ನನಗೆ 5 ರಿಂದ 6 ಎಕರೆ ಜಮೀನು ಕೊಡಬೇಕಿತ್ತು. ಆದರೂ ಎಮ್ಮೆಯು ಕೂಡ ಚೆನ್ನಾಗಿದೆ. ದೇವರ ದಯೆಯಿಂದ ನಮ್ಮ ಮಾವ ತುಂಬಾ ಶ್ರೀಮಂತ ಮತ್ತು ನನಗಾಗಿ ಎಮ್ಮೆಯನ್ನು ಗಿಫ್ಟ್ ನೀಡಿದ್ದಾನೆ ಎಂದು ನದೀಮ್ ಹಾಸ್ಯ ಚಟಾಕಿಯನ್ನು ಹಾರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ ಅರ್ಷದ್ ನದೀಮ್ ಅವರು 1997, ಜನವರಿ 2ರಂದು ಪಾಕಿಸ್ತಾನದ ಪಂಜಾಬ್ ಪ್ರದೇಶದ ಖಾನೇವಾಲ್ ಎಂಬ ಹಳ್ಳಿಯಲ್ಲಿ ಜನಿಸಿದರು. ನದೀಮ್ ತನ್ನ ಹೆತ್ತವರ ಏಳು ಮಕ್ಕಳಲ್ಲಿ ಮೂರನೆಯವನು. ತಂದೆ ಮೊಹಮ್ಮದ್ ಅಶ್ರಫ್ ಕೂಲಿ ಕಾರ್ಮಿಕ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಅಶ್ರಫ್ ತನ್ನ ಕುಟುಂಬವನ್ನು ಪೋಷಿಸಲು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಹೀಗಿದ್ದರೂ ದೊಡ್ಡ ಸಂಸಾರ ನಡೆಸುವುದು ಕಷ್ಟವಾಗಿತ್ತು. ಕೆಲವೊಮ್ಮೆ ತಿನ್ನುವುದಕ್ಕೂ ತೊಂದರೆಯಾಗುತ್ತಿತ್ತು. ಅವರು ಕೆಲವೊಮ್ಮೆ ದಿನಕ್ಕೆ ಒಂದು ಬಾರಿ ಮಾತ್ರ ತಿನ್ನುತ್ತಿದ್ದರು.
ಕಡು ಬಡತನದಲ್ಲೂ ಅರ್ಷದ್ ನದೀಮ್ಗೆ ಜಾವೆಲಿನ್ ಎಸೆತದ ಮೇಲೆ ಆಸಕ್ತಿ ಹುಟ್ಟಿಕೊಂಡಿತು. ನಿಧಾನವಾಗಿ ಅದರಲ್ಲಿ ತರಬೇತಿಯನ್ನೂ ಪಡೆದರು. ಆದರೆ, ಬಡತನದ ಕಾರಣ ಅರ್ಷದ್ ನದೀಮ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಹಣ ಹೊಂದಿರಲಿಲ್ಲ. ಈತನ ಪ್ರತಿಭೆಯನ್ನು ಗುರುತಿಸಿದ ಗ್ರಾಮಸ್ಥರೇ ನದೀಮನನ್ನು ಬೇರೆಡೆ ಸ್ಪರ್ಧೆಗಳಿಗೆ ಕಳುಹಿಸಿದ್ದರು. ಅವರ ನಂಬಿಕೆಯನ್ನು ಉಳಿಸಿಕೊಂಡು, ಅರ್ಷದ್ ನದೀಮ್ ಹಂತ ಹಂತವಾಗಿ ಬೆಳೆದರು.
ಪ್ಯಾರಿಸ್ ಒಲಿಂಪಿಕ್ಸ್ಗೆ ಪಾಕಿಸ್ತಾನದಿಂದ ಏಳು ಕ್ರೀಡಾಪಟುಗಳು ಮಾತ್ರ ಬಂದಿದ್ದರು. ಅವರಲ್ಲಿ ಅರ್ಷದ್ ನದೀಮ್ ಕೂಡ ಒಬ್ಬರು. ಆದಾಗ್ಯೂ, ಸುಮಾರು 32 ವರ್ಷಗಳ ನಂತರ ಅವರು ಪಾಕಿಸ್ತಾನಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಇದು ವೈಯಕ್ತಿಕ ವಿಭಾಗದಲ್ಲಿ ಪಾಕಿಸ್ತಾನದ ಮೊದಲ ಚಿನ್ನದ ಪದಕವಾಗಿದೆ. ಅದಕ್ಕೂ ಮುನ್ನ 2023ರಲ್ಲಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಸದಾ ಆರ್ಥಿಕ ಬಿಕ್ಕಟ್ಟು, ಭಯೋತ್ಪಾದಕರ ದಾಳಿ ಹಾಗೂ ಬಡತನದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಇಂದು ಚಿನ್ನದ ಪದಕ ನೀಡುವ ಮೂಲಕ ಅರ್ಷದ್ ನದೀಮ್ ಹೀರೋ ಆಗಿದ್ದಾರೆ.