ಕೊಚ್ಚಿ: ಮಲಯಾಳಂ ಸಿನಿಮಾರಂಗದ ನಟಿಯರು ಅನುಭವಿಸುತ್ತಿರುವ ಲೈಂಗಿಕ ಕಿರುಕುಳ ಹಗರಣದ ವಿವಾದ ದಿನೇದಿನೆ ತೀವ್ರಗೊಳ್ಳುತ್ತಿದ್ದು, #MeToo ಅಭಿಯಾನವು ದೇಶಾದ್ಯಂತ ಹಸೊ ಅಲೆಯನ್ನು ಸೃಷ್ಟಿಸಿದ್ದು, ಹಿರಿಯ ನಿರ್ದೇಶಕರು, ನಿರ್ಮಾಪಕರು ಮತ್ತು ನಟರ ಕೈಯಲ್ಲಿ ತಾವು ಅನುಭವಿಸಿದ ದೌರ್ಜನ್ಯದ ಕುರಿತು ನಟಿಯರು ಮೌನ ಮುರಿಯುತ್ತಿದ್ದಾರೆ.
ಇತ್ತೀಚೆಗಷ್ಟೇ ಕೆ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಬಳಿಕ ಅನೇಕ ಸ್ಟಾರ್ ನಟಿಯರು ತಮಗಾದ ಕಾಸ್ಟಿಂಗ್ ಕೌಚ್ ಅನುಭವಗಳ ಬಗ್ಗೆ ಮುಕ್ತವಾಗಿ ಕ್ಯಾಮರಾ ಮುಂದೆ ಮಾತನಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಯಾರಿಂದ ತಾವು ಇಂತಹ ಕೆಟ್ಟ ಪರಿಸ್ಥಿತಿ ಎದುರಿಸಿದೆವು ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಚಿತ್ರರಂಗದ ಕರಾಳ ಮುಖವನ್ನು ಬಟಾಬಯಲು ಮಾಡ್ತಿದ್ದಾರೆ. ಸದ್ಯ ಈ ಸಾಲಿಗೆ ಇದೀಗ ಮಲಯಾಳಂನ ಖ್ಯಾತ ನಟಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಖ್ಯಾತ ನಿರ್ದೇಶಕನಿಂದ ಅನುಭವಿಸಿದ ಕಿರುಕುಳದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಮಲಯಾಳಂನ ಖ್ಯಾತ ನಿರ್ದೇಶಕ ರಂಜಿತ್ 2012ರಲ್ಲಿ ಆಡಿಷನ್ ನೆಪದಲ್ಲಿ ನನ್ನನ್ನು ಬೆಂಗಳೂರಿಗೆ ಕರೆದೊಯ್ದಿದ್ದರು. ಅಲ್ಲಿ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ನಿರ್ದೇಶಕ ರಂಜಿತ್ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು. ಬಳಿಕ ನನ್ನ ರೂಮಿಗೆ ಬಂದ ರಂಜಿತ್ ನನ್ನ ಮೇಲೆ ಹಲ್ಲೆ ಮಾಡಿ ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿದರು. ಬಳಿಕ ಇದು ಆಡಿಷನ್ನ ಭಾಗವಾಗಿದ್ದು, ಹೀಗೆ ಸಹಕರಿಸಿದರೆ ಒಳ್ಳೆಯ ಆಫರ್ ಹಾಗೂ ಹಣವನ್ನು ಕೊಡುವುದಾಗಿ ಆಮಿಷ್ ಒಡ್ಡಿದರು. ಮಾರನೆಯ ದಿನ ನನಗೆ ಹಣವನ್ನು ಕೊಟ್ಟು ಯಾರ ಬಳಿಯೂ ಹೇಳದಂತೆ ಬೆದರಿಕೆಯನ್ನು ಹಾಕಲಾಯಿತು ಎಂದು ಹೆಸರೇಳಲು ಇಚ್ಛಿಸಿದ ನಟಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಿರ್ದೇಶಕ ರಂಜಿತ್ ವಿರುದ್ಧ ಇದು ಎರಡನೇ ಆರೋಪವಾಗಿದ್ದು, ಇದಕ್ಕೂ ಮೊದಲು ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಅವರು ತಮ್ಮ ಮೇಲೆ ಕೊಚ್ಚಿಯ ಖಾಸಗಿ ಹೋಟೆಲ್ನಲ್ಲಿ ನಿರ್ದೇಶಕ ರಂಜಿತ್ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಸಂಬಂಧ FIR ಕೂಡ ದಾಖಲಾಗಿದೆ. ಕೆ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಬೆನ್ನಲ್ಲೇ ಇಡೀ ಮಲಯಾಳಂ ಚಿತ್ರರಂಗ ಅಲ್ಲಾಡಿ ಹೋಗಿದ್ದು, ಆಡಳಿತ ಮಂಡಳಿಯನ್ನು ವಿಸರ್ಜಿಸಲಾಗಿದೆ. ಖ್ಯಾತ ನಟ, ನಿರ್ದೇಶಕರು ಹಾಗೂ ನಿರ್ಮಾಪಕರ ವಿರುದ್ಧ ಸರಣಿ ಲೈಂಗಿಕ ಕಿರುಕುಳದ ಆರೋಪಗಳು ಕೇಳಿ ಬರುತ್ತಿವೆ.