ಜಮ್ಮು- ಕಾಶ್ಮೀರ : ಶಾಂತವಾಗಿದ್ದ ಕೇಂದ್ರಾಡಳಿತ ಪ್ರದೇಶ ಜಮ್ಮು – ಕಾಶ್ಮೀರದಲ್ಲಿ ಸರಣಿ ಉಗ್ರರ ದಾಳಿಗಳು ನಡೆಯುತ್ತಿದ್ದು, ಸೋಮವಾರ ರಕ್ತದೋಕುಳಿ ಹರಿದಿದೆ. ಕಥುವಾ ಜಿಲ್ಲೆಯಲ್ಲಿ ಉಗ್ರರ ಗುಂಪು ಯೋಧರ ವಾಹನದ ಮೇಲೆ ಗುಂಡಿನ ಮಳೆಗರೆದಿದ್ದು, ಐವರು ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಕಥುವಾ ಪಟ್ಟಣದಿಂದ 150 ಕಿಮೀ ದೂರದಲ್ಲಿರುವ ಲೋಹೈ ಮಲ್ಹಾರ್‌ನ ಬದ್ನೋಟಾ ಗ್ರಾಮದ ಬಳಿ ಮಧ್ಯಾಹ್ನ 3.30 ರ ಸುಮಾರಿಗೆ ನಿತ್ಯ ಗಸ್ತು ತಿರುಗುತ್ತಿದ್ದ ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದು, ಗುಂಡಿನ ದಾಳಿ ನಡೆಸಿದ್ದಾರೆ.
ಹತ್ತು ಯೋಧರಿದ್ದ ಸೇನಾ ವಾಹನದ ಮೇಲೆ ಉಗ್ರರ ಗುಂಪು ದಾಳಿ ನಡೆಸಿದೆ. ಇದರ ಪರಿಣಾಮವಾಗಿ ಐವರು ಸೈನಿಕರು ಮಾರಣಾಂತಿಕ ಗಾಯಗೊಂಡಿದ್ದರು. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದರೂ, ಭಯೋತ್ಪಾದಕರು ಹತ್ತಿರದ ಅರಣ್ಯಕ್ಕೆ ಓಡಿಹೋದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ನುಸುಳಿ ಬಂದ ಮೂವರು ಉಗ್ರರು ಈ ದಾಳಿ ನಡೆಸಿದ್ದಾರೆ. ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ರಕ್ತಪಿಪಾಸುಗಳು ಸೇನಾ ವಾಹನದ ಮೇಲೆ ದಾಳಿ ನಡೆಸಿದ ಬಳಿಕ ಅರಣ್ಯದಲ್ಲಿ ತಪ್ಪಿಸಿಕೊಂಡಿದ್ದಾರೆ. ಉಗ್ರರ ಹುಟ್ಟಡಗಿಸಲು ಸೇನಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 10 ಯೋಧರು ಗಾಯಗೊಂಡಿದ್ದಾರೆ. ಅವರಲ್ಲಿ ನಾಲ್ವರು ಮೊದಲು ಸಾವಿಗೀಡಾದರು. ತೀವ್ರ ಗಾಯಗೊಂಡಿದ್ದ ಮತ್ತೊಬ್ಬ ಸೇನಾ ಸಿಬ್ಬಂದಿ ಆಸ್ಪತ್ರೆಯಲ್ಲಿ ಅಸುನೀಗಿದರು. ಇದರಿಂದ ಸಾವಿನ ಸಂಖ್ಯೆ ಐದಕ್ಕೆ ಏರಿದೆ.