ಉದ್ಯೋಗ ಮೀಸಲಾತಿ ವಿವಾದ : ಕರ್ನಾಟಕದ ಖಾಸಗಿ ಕಂಪನಿಗಳಿಗೆ ಆಂಧ್ರಪ್ರದೇಶ ಗಾಳ

ಬೆಂಗಳೂರು: ಕರ್ನಾಟಕದಲ್ಲಿ ಖಾಸಗಿ ಕಂಪನಿಗಳ ಹುದ್ದೆಗಳಲ್ಲಿ ಸ್ಥಳೀಯರಿಗೆ ಶೇಕಡಾ 100 ರಷ್ಟು ಮೀಸಲಾತಿ ನೀಡಬೇಕು ಎಂಬ ವಿಧೇಯಕಕ್ಕೆ ಹಲವು ಖಾಸಗಿ ಕಂಪನಿಗಳು ವಿರೋಧ ವ್ಯಕ್ತಪಡಿಸಿದ್ದು, ಇದರ ಬೆನ್ನಲ್ಲೇ ಕರ್ನಾಟಕ ಐಟಿ ಕಂಪನಿಗಳನ್ನು ತನ್ನತ್ತ ಸೆಳೆಯಲು ಆಂಧ್ರಪ್ರದೇಶ ಗಾಳ ಹಾಕಲು ಶುರು ಮಾಡಿದೆ.

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ, ಸಚಿವ ನಾರಾ ಲೋಕೇಶ್​​ ಅವರು ನಾಸ್ಕಾಮ್​​​ಗೆ ತಮ್ಮ ರಾಜ್ಯಕ್ಕೆ ಬರಲು ವಿಶೇಷ ಆಹ್ವಾನ ನೀಡಿದ್ದಾರೆ. ಕಂಪನಿಯ ಆಕ್ಷೇಪವನ್ನು ತಮ್ಮ ಸರ್ಕಾರ ಅರ್ಥ ಮಾಡಿಕೊಂಡಿದೆ. ಆಂಧ್ರದಲ್ಲಿ ಐಟಿ ಸೇವೆಗಳನ್ನು ವಿಸ್ತರಿಸಬಹುದು ಎಂದು ಕಂಪನಿಗೆ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರ ಪರಿಚಯಿಸಿದ ಕೈಗಾರಿಕೆಗಳ ವಿಧೇಯಕದ ಬಗ್ಗೆ ಇರುವ ಅಸಮಾಧಾನವನ್ನು ನಮ್ಮ ಸರ್ಕಾರ ಅರ್ಥಮಾಡಿಕೊಂಡಿದೆ. ಇಲ್ಲಿ ತಮ್ಮ ಐಟಿ ಸೇವೆಗಳನ್ನು ವಿಸ್ತರಿಸಬಹುದು. ರಾಜ್ಯದಲ್ಲಿ ಐಟಿ ಸೇವೆ ವಿಸ್ತರಣೆಗೆ ಹೆಚ್ಚಿನ ಅವಕಾಶಗಳಿವೆ. ಇಲ್ಲಿ ಯಾವುದೇ ನಿರ್ಬಂಧಗಳು ಮತ್ತು ನಿಯಮಗಳಿಲ್ಲ. ಮುಕ್ತವಾಗಿ ಹೂಡಿಕೆ ಮಾಡಬಹುದು. ವಿಶಾಖಪಟ್ಟಣವು ಐಟಿ, ಐಟಿ ಸೇವೆಗಳು, ಕೃತಕ ಬುದ್ಧಿಮತ್ತೆ, ಡೇಟಾ ಸೆಂಟರ್ ಕ್ಲಸ್ಟರ್​​ನಂತಹ ವ್ಯವಹಾರಗಳಿಗೆ ಅನುಕೂಲಕರವಾಗಿದೆ. ಇಲ್ಲಿಗೆ ತಮ್ಮ ವ್ಯವಹಾರಗಳನ್ನು ವರ್ಗಾಯಿಸಬಹುದು ಅಥವಾ ವಿಸ್ತರಿಸಬಹುದು ಎಂದು ಹೇಳಿದ್ದಾರೆ.

ಎಪಿಯಲ್ಲಿ ಹೂಡಿಕೆಗೆ ಅತ್ಯುತ್ತಮ ಸೌಲಭ್ಯಗಳು, ನಿರಂತರ ವಿದ್ಯುತ್ ಮತ್ತು ಮೂಲಸೌಕರ್ಯ ಒದಗಿಸುವುದಾಗಿಯೂ ಭರವಸೆ ನೀಡಿರುವ ಸಚಿವ ಲೋಕೇಶ್, ಆಂಧ್ರ ಸರ್ಕಾರ ಯಾವುದೇ ನಿರ್ಬಂಧ ಮತ್ತು ನಿಬಂಧನೆಗಳನ್ನು ವಿಧಿಸುವುದಿಲ್ಲ. ಸರ್ಕಾರ ಖಾಸಗಿ ಕಂಪನಿಗಳಿಗೆ ಸಂಪೂರ್ಣ ಸಹಕಾರ ನೀಡಲಿದೆ. ರಾಜ್ಯದಲ್ಲಿ ಸಾಕಷ್ಟು ವೃತ್ತಿಪರ ಯುವಕರು ಮತ್ತು ಮಾನವ ಸಂಪನ್ಮೂಲವಿದೆ. ಹೂಡಿಕೆಗೆ ಅವಕಾಶ ನೀಡಲಾಗುವುದು ಎಂದು ಆಹ್ವಾನವಿತ್ತಿದ್ದಾರೆ.

ಈ ನಡುವೆ ಕರ್ನಾಟಕ ಐಟಿ ಕಂಪನಿಗಳಿಗೆ ಗಾಳ ಹಾಕಲು ಮುಂದಾಗಿರುವ ಆಂಧ್ರಪ್ರದೇಶಕ್ಕೆ ಸಚಿವ ಪ್ರಿಯಾಂಕ್ ಖರ್ಗೆಯವರು ತಿರುಗೇಟು ನೀಡಿದ್ದಾರೆ.

ನೀತಿ ಯೋಜನೆಗಳ ಕರಡು ರಚನೆಯವ್ವಿ ಉದ್ಯಮದ ಮುಖಂಡರು, ಸಲಹಾ ಸಂಸ್ಥೆಗಳು ಮತ್ತು ಒಕ್ಕೂಟಗಳೊಂದಿಗೆ ಸ್ಥಿರವಾದ ಸಂಬಂಧಗಳು ಮತ್ತು ಸಮಾಲೋಚನಾ ವಿಧಾನದಿಂದಾಗಿ ರಾಜ್ಯವು ಈ ಕ್ಷೇತ್ರದಲ್ಲಿ ಯಾವಾಗಲೂ ಉತ್ತಮವಾಗಿದೆ, ಸ್ಥಳೀಯ ಪ್ರತಿಭೆಗಳನ್ನು ಬಳಸಿಕೊಂಡು ಜಾಗತಿಕ ಉದ್ಯೋಗಿಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ, ಹಾಗೆಯೇ ಜಾಗತಿಕ ಹೂಡಿಕೆಗಳನ್ನು ಉತ್ತೇಜಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ

Leave a Reply

Your email address will not be published. Required fields are marked *