ಬೆಂಗಳೂರು: ಕರ್ನಾಟಕದ ಸರ್ಕಾರಿ ನೌಕರರು ಕಾಲ ಕಾಲಕ್ಕೆ ಬಡ್ತಿ, ವರ್ಗಾವಣೆಗೆ ಒಳಪಡುತ್ತಾರೆ. ವರ್ಗಾವಣೆಗೊಂಡಾಗ ಪ್ರತಿ ನೌಕರನಿಗೆ ಸೇರಿಕೆ ಕಾಲ (Joining Time) ಲಭ್ಯವಾಗುತ್ತದೆ. ಈ ಸೇರಿಕೆ ಕಾಲ ಹೇಗೆ ಸಿಗುತ್ತದೆ?, ನಿಯಮಗಳೇನು?, ಎಷ್ಟು ದಿನ ಮುಂತಾದ ಮಾಹಿತಿಗಳನ್ನು ಸರ್ಕಾರಿ ನೌಕರರ ಉಪಯುಕ್ತ ಮಾಹಿತಿಗಾಗಿ ಹಂಚಿಕೊಳ್ಳಲಾಗಿದೆ.
ರಾಜ್ಯ ಸರ್ಕಾರಿ ನೌಕರರ ಕಾಲದ ಕುರಿತು ಮಂಜುನಾಥ ಅರ್ಜುನ ಲಿಂಗಾರೆಡ್ಡಿ, ಪೊಲೀಸ್ ಇನ್ಸ್ಪೆಕ್ಟರ್ ನೀಡಿರುವ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿದೆ. ಹಳೆಯ ಕೇಂದ್ರ ಸ್ಥಾನ, ಹೊಸ ಕೇಂದ್ರ ಸ್ಥಾನ, ಪಡೆಯಬಹುದಾದ ಸೇರಿಕೆ ಕಾಲ, ಯಾವಾಗ ಸೇರಿಕೆ ಕಾಲ ಲಭ್ಯವಾಗುವುದಿಲ್ಲ ಎಂಬ ಮಾಹಿತಿಯನ್ನು ವಿವರವಾಗಿ ನೀಡಲಾಗಿದೆ.
ಮುಂದಿನ ವಾರ ಸರ್ಕಾರಿ ನೌಕರರಿಗೆ ವಿಶೇಷ ರಜೆ
ಸರ್ಕಾರಿ ನೌಕರನ ಸೇರಿಕೆ ಕಾಲ: ಸರ್ಕಾರಿ ನೌಕರನ ಸೇರಿಕೆ ಕಾಲ ಎಂದರೆ ಕರ್ನಾಟಕ ರಾಜ್ಯ ಸೇವಾ ನಿಯಮಗಳು 1958ರ ನಿಯಮದಂತೆ ಸರ್ಕಾರಿ ನೌಕರನು ಒಂದು ಹೊಸ ಹುದ್ದೆಗೆ ಹಾಜರಾಗಲು ಅಥವಾ ಅವನನ್ನು ನಿಯುಕ್ತಿಗೊಳಿಸಿದ ಸ್ಥಳಕ್ಕೆ ಹೋಗಲು ಅನುಮತಿಸಲಾದ ಕಾಲವನ್ನು ಸೇರಿಕೆ ಕಾಲ ಎಂದು ಕರೆಯುತ್ತೆವೆ. ಯಾರೇ ಒಬ್ಬ ಸರ್ಕಾರಿ ನೌಕರನು ಸರ್ಕಾರದ ಹಿತಾಸಕ್ತಿ ಮೇರೆಗೆ ವರ್ಗಾವಣೆಯಾದಾಗ, ಆತನಿಗೆ ಆ ಹುದ್ದೆಗೆ ಹೋಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೇರಿಕೆ ಕಾಲ ಸಿಗುತ್ತದೆ.
ಸರ್ಕಾರಿ ನೌಕರನನ್ನು ಯಾವುದೇ ಒಂದು ವಿಶೇಷ ಕರ್ತವ್ಯಕ್ಕೆ ತಾತ್ಕಾಲಿಕವಾಗಿ ನಿಯೋಜಿಸಿದಾಗ ಮತ್ತು ಆತನ ಸ್ವಂತ ಕೋರಿಕೆಯ ಮೇಲೆ ವರ್ಗಾವಣೆಯಾದಾಗ ಆತನಿಗೆ ಆ ಸ್ಥಳವನ್ನು ಹೋಗಿ ತಲುಪಲು ಬೇಕಾಗುವ ಪ್ರಯಾಣದ ಅವಧಿಯನ್ನು ಬಿಟ್ಟು ಆತನಿಗೆ ಯಾವುದೇ ಸೇರಿಕೆ ಕಾಲ ಲಭಿಸುವುದಿಲ್ಲ. ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ವರ್ಗಾವಣೆಯಿಂದ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ ನಿವಾಸ ಬದಲಾವಣೆಯಾಗದೇ ಇದ್ದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭ್ಯವಾಗುವ ಸೇರಿಕೆ ಕಾಲಾವಧಿ
ಸರ್ಕಾರಿ ನೌಕರರ ಗೃಹ ನಿರ್ಮಾಣ ಮುಂಗಡ ಹಣ ಪಡೆಯಲು ನಿಯಮಗಳು
* ಸರ್ಕಾರಿ ನೌಕರನು ಪೂರ್ವಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜ್ ಅನ್ನು ವಹಿಸಿಕೊಟ್ಟಲ್ಲಿ, ಅದೇ ದಿನ ಮಧ್ಯಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜ್ ವಹಿಸಿಕೊಳ್ಳತಕ್ಕದ್ದು.
* ಸರ್ಕಾರಿ ನೌಕರನು ಮಧ್ಯಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜ್ ವಹಿಸಿಕೊಟ್ಟಲ್ಲಿ, ಮರುದಿನ ಪೂರ್ವಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜ್ ಅನ್ನು ವಹಿಸಿಕೊಳ್ಳತಕ್ಕದ್ದು.
* ಸರ್ಕಾರಿ ನೌಕರನು ಮಧ್ಯಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜ್ ಅನ್ನು ವಹಿಸಿಕೊಟ್ಟಲ್ಲಿ, ಮರುದಿನ ರಜಾದಿನವಾಗಿದ್ದರೆ, ಮುಂದಿನ ಕೆಲಸದ ದಿನದಂದು ಪೂರ್ವಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜ್ ಅನ್ನು ವಹಿಸಿಕೊಳ್ಳತಕ್ಕದ್ದು.
* ಸರ್ಕಾರಿ ಕಛೇರಿಗಳು ಪೂರ್ವಾಹ್ನದಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದರೆ, ವರ್ಗಾವಣೆಗೊಂಡ ಸರ್ಕಾರಿ ನೌಕರನು ತನ್ನ ಕಾರ್ಯಭಾರವನ್ನು ಪೂರ್ವಾಹ್ನದಲ್ಲಿ ವಹಿಸಿಕೊಟ್ಟಿದ್ದರೆ, ಆತನು ತನ್ನ ಮುಂದಿನ ಕರ್ತವ್ಯದ ಕಾರ್ಯಾಭಾರವನ್ನು ಮುಂದಿನ ಕೆಲಸದ ದಿನದ ಪೂರ್ವಾಹ್ನದಲ್ಲಿಯೇ ತನ್ನ ಕರ್ತವ್ಯದ ಚಾರ್ಜ್ ಅನ್ನು ತೆಗೆದುಕೊಳ್ಳತಕ್ಕದ್ದು. ಪೂರ್ವಾಹ್ನವೆಂದರೆ 12 ಗಂಟೆಯೊಳಗಿನ ಸಮಯ.
ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರದ ಹಿತಾಸಕ್ತಿಯಲ್ಲಿ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ ನಿವಾಸ ಬದಲಾವಣೆಯಾಗುವುಂತೆ ವರ್ಗಾವಣೆಯಾದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಹಳೆಯ ಕೇಂದ್ರ ಸ್ಥಾನ ಮತ್ತು ಹೊಸ ಕೇಂದ್ರ ಸ್ಥಾನದ ನಡುವಣ ದೂರದ ಮೇಲೆ ಅವಲಂಬಿತ. 1000 ಕಿ. ಮೀ. ಮತ್ತು ಕಡಿಮೆ ದೂರವಿದ್ದರೆ 10 ದಿನಗಳು, 1000 ಕಿ. ಮೀ. ಗಿಂತಲೂ ಹೆಚ್ಚು ಇದ್ದರೆ 12 ದಿನಗಳು. 2000 ಕಿ. ಮೀ. ಗಿಂತಲೂ ಹೆಚ್ಚು ಇದ್ದರೆ 15 ದಿನಗಳು (ವಿಮಾನದ ಮೂಲಕ ಪ್ರಯಾಣ ಮಾಡಿದಲ್ಲಿ ಗರಿಷ್ಠ 12 ದಿನಗಳು).
ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರದ ಹಿತಾಸಕ್ತಿಯಲ್ಲಿ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗುವುಂತೆ ವರ್ಗಾವಣೆಯಾದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಆತನು ತನ್ನ ಕರ್ತವ್ಯದ ಪ್ರಭಾರವನ್ನು ಪೂರ್ವಾಹ್ನದಲ್ಲಿ ವಹಿಸಿಕೊಟ್ಟಿದ್ದರೆ ಹಳೆಯ ಹುದ್ದೆಯ ಪ್ರಭಾರವನ್ನು ತ್ಯಜಿಸಿದ ದಿನದಿಂದ ಪ್ರಾರಂಭವಾಗುತ್ತದೆ. ಆತನು ತನ್ನ ಕರ್ತವ್ಯದ ಪ್ರಭಾರವನ್ನು ಅಪರಾಹ್ನದಲ್ಲಿ ವಹಿಸಿಕೊಟ್ಟಿದ್ದರೆ ಮುಂದಿನ ದಿನದಿಂದ ಸೇರಿಕೆ ಕಾಲವು ಪ್ರಾರಂಭವಾಗುತ್ತದೆ.
ಯಾವನೇ ಒಬ್ಬ ಸರ್ಕಾರಿ ನೌಕರನು ವರ್ಗಾವಣೆಗೊಂಡು, ಸೇರಿಕೆ ಕಾಲವಧಿಯಲ್ಲಿದ್ದಾಗ, ಆತನನ್ನು ಮೊದಲು ವರ್ಗಾವಣೆಗೊಳಿಸಿದ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿದಾಗ, ಆತನಿಗೆ ಲಭ್ಯವಾಗುವ ಸೇರಿಕೆ ಕಾಲವನ್ನು ಆತನು ಪರಿಷ್ಕೃತ ಆದೇಶವನ್ನು ಪಡೆಯುವುದಕ್ಕಿಂತ ಮುಂಚೆ ಬಳಸಿಕೊಂಡಿದ್ದ ಸೇರಿಕೆ ಕಾಲವನ್ನು ಬಿಟ್ಟು ಆತನು ಹೊಸದಾಗಿ ಪರಿಷ್ಕೃತ ಆದೇಶವನ್ನು ಪಡೆದ ದಿನಾಂಕದಿಂದ ಹೊಸ ಸೇರಿಕೆ ಕಾಲವು ಬಳಸಿಕೊಳ್ಳಲು ಹಕ್ಕುಳ್ಳವನಾಗಿರುತ್ತಾನೆ.
ಸರ್ಕಾರಿ ನೌಕರನು ವರ್ಗಾವಣೆಗೊಂಡು, ಸೇರಿಕೆ ಕಾಲವಧಿಯಲ್ಲಿದ್ದಾಗ, ಆತನನ್ನು ಮೊದಲು ವರ್ಗಾವಣೆಗೊಳಿಸಿದ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿದಾಗ, ಆತನಿಗೆ ಲಭ್ಯವಾಗುವ ಸೇರಿಕೆ ಕಾಲ ಆತನು ಪರಿಷ್ಕೃತ ಆದೇಶವನ್ನು ಸ್ವೀಕರಿಸಿದ ಸ್ಥಳದಿಂದಲೇ ಸೇರಿಕೆ ಕಾಲವು ಪ್ರಾರಂಭವಾಗುತ್ತದೆ. ನೌಕರನನ್ನು ಅಮಾನತ್ತಿನಿಂದ ಬಿಡುಗಡೆಗೊಳಿಸಿ ಅಮಾನತ್ತಿಗೆ ಮುಂಚೆ ಅಥವಾ ಅಮಾನತ್ತಿನ ಮುಂಚಿನ ರಜೆಯ ನಿಕಟಪೂರ್ವದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಮರು ನೇಮಿಸಿದ ಸಂದರ್ಭದಲ್ಲಿ ಯಾವುದೇ ಸೇರಿಕೆ ಕಾಲವು ಲಭ್ಯವಾಗುವುದಿಲ್ಲ.
ಯಾವನೇ ಒಬ್ಬ ಸರ್ಕಾರಿ ನೌಕರನನ್ನು ಅಮಾನತ್ತಿನಿಂದ ಬಿಡುಗಡೆಗೊಳಿಸಿ ಅಮಾನತ್ತಿಗೆ ಮುಂಚೆ ಅಥವಾ ಅಮಾನತ್ತಿನ ಮುಂಚಿನ ರಜೆಯ ನಿಕಟಪೂರ್ವದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳವನ್ನು ಬಿಟ್ಟು ಬೇರೆ ಸ್ಥಳಕ್ಕೆ ನೇಮಿಸಿದಾಗ ಸೇರಿಕೆ ಕಾಲವು ಲಭ್ಯವಾಗುತ್ತದೆ. ಅಮಾನತ್ತಿನಿಂದ ಬಿಡುಗಡೆಗೊಳಿಸಿ ಪುನರ್ ನೇಮಕ ಮಾಡಿದ ಆದೇಶ ಸ್ವೀಕರಿಸಿದ ದಿನಾಂಕದ ನಂತರದ ದಿನದಿಂದ ಸೇರಿಕೆ ಕಾಲವು ಲಭ್ಯವಾಗುತ್ತದೆ.
ನೌಕರನನ್ನು ಅಮಾನತ್ತಿನಿಂದ ಬಿಡುಗಡೆಗೊಳಿಸಿ ಅಮಾನತ್ತಿನಲ್ಲಿದ್ದ ಅವಧಿಯಲ್ಲಿ ವಾಸಮಾಡಲು ಅನುಮತಿ ನೀಡಲಾಗಿದ್ದ ಸ್ಥಳವನ್ನು ಬಿಟ್ಟು ಬೇರೆ ಸ್ಥಳಕ್ಕೆ ನೇಮಕ ಮಾಡಿದಾಗ ಆತನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆ. ಅಭ್ಯಾಸ ಅಥವಾ ತರಬೇತಿಯನ್ನು ಪಡೆಯಲು ಸಕ್ಷಮ ಪ್ರಾಧಿಕಾರದಿಂದ ಆದೇಶ ಪಡೆದು ರಾಜ್ಯದೊಳಗೆ ಅಥವಾ ರಾಜ್ಯದ ಹೊರಗೆ ಆದರೆ ಭಾರತದೊಳಗೆ ಪ್ರತಿನಿಯೋಜಿತನಾದಲ್ಲಿ, ಯಾವುದೇ ಸೇರಿಕೆ ಕಾಲ ಲಭ್ಯವಾಗುವುದಿಲ್ಲ. ಯಾಕೆಂದರೆ ತರಬೇತಿಗೆ ನಿಕಟಪೂರ್ವದಲ್ಲಿ ಹಾಗೂ ಅನಂತರದ ಪ್ರಯಾಣದ ಅವಧಿಯನ್ನು ತರಬೇತಿಯ ಭಾಗವೆಂದು ಪರಿಗಣಿಸಲಾಗುವುದು ಹಾಗೂ ತರಬೇತಿಯ ಅವಧಿಯನ್ನು ಕರ್ತವ್ಯದ ಮೇಲಿನ ಅವಧಿಯೆಂದು ಪರಿಗಣಿಸಲಾಗುವುದು. ತರಬೇತಿಗೆ ಮುಂಚೆ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಿಂದ ಬೇರೆಯಾದ ಸ್ಥಳಕ್ಕೆ ಆತನನ್ನು ನಿಯುಕ್ತಿಗೊಳಿಸಿದರೆ (ಇಲ್ಲಿ ವರ್ಗಾವಣೆ ಎನ್ನುವ ಪದವನ್ನು ಬಳಸಿರುವುದಿಲ್ಲ) ಸೇರಿಕೆ ಕಾಲವು ಲಭ್ಯವಾಗುತ್ತದೆ.