ಕಲಬುರಗಿ: ‘ಇದೇನು ಬಸ್ ನಿಲ್ದಾಣವೋ, ಉದ್ಯಾನವೋ’ ಎನ್ನುವ ಗೊಂದಲಕ್ಕೆ ಒಳಗಾಗುವಷ್ಟು ನಗರದ ಕೇಂದ್ರ ಬಸ್ ನಿಲ್ದಾಣದ ಚಹರಯೇ ಬದಲಾಗಿದೆ.
ಮುಖ್ಯ ಪ್ರವೇಶ ದ್ವಾರದಿಂದ ಮನಿ ಪ್ಲಾಂಟ್ (ಡೆವಿಲ್ಸ್), ಹಾವಿನ ಗಿಡ, ಪೆಪೆರೊಮಿಯ, ಅರೆಕಾಪಾಮ್, ಕ್ಯಾಲಥಿಯಾ ಸೇರಿ ನೆರಳಿನಲ್ಲಿ ಬೆಳೆಯುವ ವಿವಿಧ ಬಗೆಯ 300 ಬಳ್ಳಿ, ಸಸಿಗಳನ್ನು ಬಣ್ಣಬಣ್ಣದ ಪಾಟ್ಗಳಲ್ಲಿ ನೆಟ್ಟು ತೂಗು ಹಾಕಿದ ಪರಿಣಾಮ ನಗರದ ಕೇಂದ್ರ ಬಸ್ ನಿಲ್ದಾಣದ ಸ್ವರೂಪವೇ ಬದಲಾಗಿದೆ.
ಪ್ರಯಾಣಿಕರ, ವಿದ್ಯಾರ್ಥಿನಿಯರ ಮೆಚ್ಚುಗೆಗೂ ಪಾತ್ರವಾಗಿದೆ.
ಕೇವಲ ಅಲಂಕಾರಿಕ ಸಸಿ, ಗಿಡಗಷ್ಟೇ ಅಲ್ಲದೆ ಅಮೃತಬಳ್ಳಿಯಂತ ಔಷಧ ಬಳ್ಳಿಗಳನ್ನು ನೆಟ್ಟಿದ್ದಾರೆ.
‘ನಮ್ಮ ಊರಿಗೆ ಹೋಗುವ ಬಸ್ ತಡವಾದರೆ ಇಲ್ಲೇ ಕಾಯುವುದು ಅನಿವಾರ್ಯ. ನಮ್ಮ ಮನೆಯ ಹಿತ್ತಿಲಲ್ಲೂ ಅನೇಕ ಬಳ್ಳಿ, ತರಕಾರಿ ಗಿಡ ಹಚ್ಚಿದ್ದೇವೆ. ಹೀಗಾಗಿ, ಸಸ್ಯಗಳ ಸಂಗದಲ್ಲಿ ಕಾಯುವಿಕೆಯೂ ಮುದ ನೀಡುತ್ತದೆ. ಅಲ್ಲದೆ ಗಾಳಿ ಬೀಸಿದಾಗ ಇಲ್ಲಿರುವ ವಿವಿಧ ಸಸಿಗಳಿಂದ ಬರುವ ಸುಗಂಧ ವಾತಾವರಣವನ್ನು ಇನ್ನಷ್ಟು ಸಹ್ಯವಾಗಿಸುತ್ತದೆ’ ಎಂದು ಆಳಂದ ಪಟ್ಟಣದ ವಿದ್ಯಾರ್ಥಿನಿ ಅನ್ನಪೂರ್ಣ ಹೇಳಿದರು.
ನಿರುಪಯುಕ್ತ ವಸ್ತುಗಳಿಂದ ಪಕ್ಷಿ ನಿರ್ಮಾಣ: ಕೇಂದ್ರ ಬಸ್ ನಿಲ್ದಾಣದ ಮುಖ್ಯ ದ್ವಾರದ ಎರಡೂ ಬದಿ ಕಬ್ಬಣದ ನಿರುಪಯುಕ್ತ ವಸ್ತುಗಳಿಂದ ನಿರ್ಮಿಸಿರುವ ಚಿಟ್ಟೆ, ನವಿಲು ಪ್ರಯಾಣಿಕರ ಗಮನ ಸೆಳೆಯುತ್ತಿವೆ. ಮಕ್ಕಳಂತೂ ಒಂದು ಗಳಿಗೆ ಅಲ್ಲೇ ನಿಂತು, ‘ಅಮ್ಮಾ ಅಮ್ಮಾ ಪಿಕಾಕ್ ನೋಡಮ್ಮಾ. ಬಟರ್ ಫ್ಲೈನೂ ಇದೆ’ ಎಂದು ಚಪ್ಪಾಳೆ ತಟ್ಟಿ ಕುಣಿಯುತ್ತಾರೆ.
‘ಸ್ವಚ್ಛತೆಗೆ ಸಾರ್ವಜನಿಕರೂ ಸಹರಿಸಲಿ’: ‘ನಾವೇನೋ ಸಸಿ ನೆಟ್ಟು, ನಿತ್ಯ ನಾಲ್ಕಾರು ಬಾರಿ ಕಸ ಹೊಡೆಸಿ ಸ್ವಚ್ಛತೆ ಬಗ್ಗೆ ಕಾಳಜಿ ಮಾಡುತ್ತೇವೆ. ಆದರೆ ಗಿಡ, ಸಸಿ ಹಚ್ಚಿದ ಪಾಟ್ಗಳಲ್ಲಿ, ಕಂಬ, ಗೋಡೆಗಳಿಗೆ ಉಗುಳುತ್ತಾರೆ. ಒಣ ತ್ಯಾಜ್ಯವಾದರೆ ಸುಲಭವಾಗಿ ವಿಲೇವಾರಿ ಮಾಡಿಸಬಹುದು. ಕೆಲವರ ಅನಾಗರಿಕ ವರ್ತನೆ ಬೇಸರ ತರಿಸುತ್ತದೆ’ ಎಂದು ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
‘ಕೆಲ ಯುವಕರು, ಕಾಲೇಜು ವಿದ್ಯಾರ್ಥಿಗಳು ಯಾರ ಮಾತನ್ನೂ ಲೆಕ್ಕಿಸದೆ ಕಂಡಕಂಡಲ್ಲಿ ಉಗುಳುತ್ತಾರೆ. ಹೇಳಲು ಹೋದರೆ ಮೈ ಮೇಲೆ ಬಿದ್ದು ಜಗಳಕ್ಕೆ ಬರುತ್ತಾರೆ. ಕತ್ತಲಾಗುತ್ತಿದ್ದಂತೆ ಬಸ್ಗಳ ಸಂದಿಯಲ್ಲೇ ಮೂತ್ರ ಮಾಡುತ್ತಾರೆ. ಬಸ್ ನಿಲ್ದಾಣದಲ್ಲಿ ಸೌಂದರ್ಯ, ಶುಚಿತ್ವ ಕಾಪಾಡಲು ಸಾವರ್ಜನಿಕರೂ ಸಹಕರಿಸಬೇಕು. ಅಂದಾಗ ಮಾತ್ರ ಇಂಥ ಸಸಿ, ಗಿಡ, ಬಳ್ಳಿ, ಹೂವುಗಳ ಮೆರುಗು ಇನ್ನೂ ಹೆಚ್ಚುತ್ತದೆ’ ಎಂದು ಅವರು ಹೇಳಿದರು.
ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಪ್ಲಾಸ್ಟಿಕ್ ಮಡಕೆಯಲ್ಲಿ ಗಿಡಗಳಿಂದ ಸೌಂದರ್ಯೀಕರಣ ಮಾಡಿರುವುದು.
ಕಮಂಗಳಾ ವಿಜಯಪುರಳೆದ ಸಲ ಇಲ್ಲಿಗೆ ಬಂದಾಗ ಸಸಿಗಳು ಇರಲಿಲ್ಲ. ಆದರೆ ಈ ಬಾರಿ ಬಂದಾಗ ಸಸಿಗಳನ್ನು ನೆಟ್ಟ ಪಾಟ್ಗಳು ಗಮನ ಸೆಳೆದವು. ಹೋಂ ಗಾರ್ಡನಿಂಗ್ ಅಂದರೆ ನನಗೆ ತುಂಬ ಇಷ್ಟ-ರಾಘು ಸಿ. ಹೈದರಾಬಾದ್ನಾನು ಕೆಲಸದ ನಿಮಿತ್ತ ಸಾಕಷ್ಟು ದೊಡ್ಡ ನಗರಗಳಿಗೆ ಹೋಗಿದ್ದೇನೆ. ಯಾವ ಬಸ್ ನಿಲ್ದಾಣದಲ್ಲೂ ಈ ರೀತಿ ಸಸಿಗಳು ನೇತು ಹಾಕಿಲ್ಲ. ಇಲ್ಲಿನ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ.ಎಸ್.ಜಿ.ಗಂಗಾಧರ ವಿಭಾಗೀಯ ನಿಯಂತ್ರಣಾಧಿಕಾರಿ 2 ಕಲಬುರಗಿ ವಿಭಾಗ (ಕೆಕೆಆರ್ಟಿಸಿ)ನಿಗಮದ ಎಂ.ಡಿ ರಾಚಪ್ಪ ಅವರ ಯೋಚನೆಯಂತೆ ಬಸ್ ನಿಲ್ದಾಣದಲ್ಲಿ ಹಸಿರೀಕರಣ ಮಾಡಿದ್ದೇವೆ. ಪ್ರಯಾಣಿಕರಿಂದಲೂ ಮೆಚ್ಚುಗೆ ಸಿಕ್ಕಿದೆ. ಕೆಕೆಆರ್ಟಿಸಿ ವ್ಯಾಪ್ತಿಯ ಜಿಲ್ಲಾ ಕೇಂದ್ರಗಳ ಬಸ್ ನಿಲ್ದಾಣಗಳಲ್ಲೂ ಇದೇ ರೀತಿ ಮಾಡುವಂತೆ ಸಲಹೆ ನೀಡಿದ್ದಾರೆ.
‘ಸಿಬ್ಬಂದಿಯಿಂದ ₹ 30 ಸಾವಿರ ಸಹಾಯ’
ಕೇಂದ್ರ ಬಸ್ ನಿಲ್ದಾಣದ ಅಂದ ಹೆಚ್ಚಿಸಲು ಆರೋಗ್ಯಕರ ಆಕರ್ಷಕ ವಾತಾವರಣ ಸೃಷ್ಟಿಸಲು ಸುಮಾರು 300 ಅಧಿಕ ಪಾಟ್ಗಳಲ್ಲಿ ಸಸಿ ಗಿಡ ಬಳ್ಳಿಗಳನ್ನು ನೆಟ್ಟು ತೂಗು ಹಾಕಿದ್ದೇವೆ. ದೊಡ್ಡ ಪಾಟ್ಗಳಲ್ಲೂ ಗಿಡ ನೆಟ್ಟು ಇಟ್ಟಿದ್ದರಿಂದ ನಿಲ್ದಾಣ ಕಳೆ ಹೆಚ್ಚಿದೆ’ ಎಂದು ಕೆಕೆಆರ್ಟಿಸಿ ವಿಭಾಗ 2ರ ನಿಯಂತ್ರಣಾಧಿಕಾರಿ ಸಿದ್ದಪ್ಪ ಗಂಗಾಧರ ತಿಳಿಸಿದರು. ‘ಜಗಜೀವನರಾಂ ಜಯಂತಿ ದಿನ ಯೋಜನೆ ರೂಪಿಸಲಾಗಿತ್ತು. ಅದರಂತೆ ವಿಭಾಗದ ಬಹುತೇಕ ಸಿಬ್ಬಂದಿ ಹಣ ನೀಡಿದ್ದಾರೆ. ಅವರಿಂದ ಸಂಗ್ರಹವಾದ ಸುಮಾರು ₹ 30 ಸಾವಿರ ಮತ್ತು ಅದಕ್ಕೆ ನಿಗಮದಿಂದ ₹ 30 ಸಾವಿರ ಸೇರಿಸಿ ನರ್ಸರಿಯಿಂದ ಸಸಿ ತಂದು ಹಾಕಲಾಗಿದೆ’ ಎಂದು ಅವರು ಹೇಳಿದರು.