ಕಲಬುರಗಿ ರೈತರಿಗೆ ಸಂಕಷ್ಟ: ತೊಗರಿ, ಈರುಳ್ಳಿ ಬೆಳೆಗೆ ‘Cuscuta’.

ಕಲಬುರಗಿ ರೈತರಿಗೆ ಸಂಕಷ್ಟ: ತೊಗರಿ, ಈರುಳ್ಳಿ ಬೆಳೆಗೆ ‘Cuscuta’.

ತೊಗರಿ, ಈರುಳ್ಳಿ ಬೆಳೆ ಕಸ್ಕೂಟಾ ರೋಗದಿಂದ ನಾಶ.

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ್ದ ರೈತರು ಹಿಂಗಾರು ಹಾಗೂ ಬೇಸಿಗೆ ಬೆಳೆಗಳ ಮೂಲಕ ಬದುಕು ಕಟ್ಟಿಕೊಳ್ಳಬೇಕೆಂದು ನಿರೀಕ್ಷೆ ಇಟ್ಟಿದ್ದರು. ಆದರೆ ಇದೀಗ ‘ಕಸ್ಕೂಟಾ’ ಎಂಬ ರೋಗದಿಂದ ಬೆಳೆಗಳು ನಾಶವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಸಮಸ್ಯೆ ಗಂಭೀರವಾಗಿ ಕಾಣಿಸಿಕೊಂಡಿದೆ. ರೈತರು ತಮ್ಮ ಜಮೀನಿನಲ್ಲಿ ಒಣಗಿ ಹೋಗಿರುವ ತೊಗರಿ ಬೆಳೆಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತೊಗರಿ, ಈರುಳ್ಳಿ ಸೇರಿದಂತೆ ಹಲವು ಬೆಳೆಗಳಿಗೆ ಕಸ್ಕೂಟಾ ಎಂಬ ರೋಗ ಆವರಿಸಿ ಬೆಳೆಗಳನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿದೆ ಎಂದು ರೈತರು ತಿಳಿಸಿದ್ದಾರೆ.

ಈ ಭಾಗದ ರೈತರು ಈ ಬಾರಿ ಅತಿಯಾದ ಮಳೆಯಿಂದ ಮುಂಗಾರು ಬೆಳೆಗಳನ್ನು ಕಳೆದುಕೊಂಡಿದ್ದರು. ಸಾಲ ಮಾಡಿ ಬೆಳೆದ ಬೆಳೆ ಹಾಳಾದ ಕಾರಣ, ಸಾಲ ತೀರಿಸಲು ಹಾಗೂ ಕುಟುಂಬದ ಜೀವನ ಸಾಗಿಸಲು ಹಿಂಗಾರು ಮತ್ತು ಬೇಸಿಗೆ ಬೆಳೆಗಳ ಮೇಲೆ ನಿರೀಕ್ಷೆ ಇಟ್ಟಿದ್ದರು. ಆದರೆ ಈಗ ಬೆಳೆಗಳು ಕೈಗೆ ಬರುತ್ತವೆ ಎನ್ನುವಷ್ಟರಲ್ಲಿ ಕಸ್ಕೂಟಾ ರೋಗ ವ್ಯಾಪಕವಾಗಿ ಹರಡಿದ್ದು, ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ನಿಂತಲ್ಲೇ ಒಣಗಿಸುತ್ತಿದೆ.

ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವರು ಚಿಂಚೋಳಿ ಭೇಟಿ ನೀಡಿದ ವೇಳೆ ರೈತರು ತಮ್ಮ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದರು. ಆದರೂ ಮೂರು ತಾಲೂಕಿನ ರೈತರಿಗೆ ಇನ್ನೂ ಯಾವುದೇ ಸ್ಪಷ್ಟ ಪರಿಹಾರ ದೊರೆತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *